ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಇಕ್ಕಟ್ಟಿನಲ್ಲಿ ಸಿಲುಕಿರುವ ಸರ್ಕಾರ, ಯೋಜನೆಗಳ ಪರಿಷ್ಕರಣೆ ಮಾಡೋದು ಖಚಿತವಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ ಜೊತೆ ಅನ್ನಭಾಗ್ಯಕ್ಕೂ (Anna Bhagya) ಫಿಲ್ಟರ್ ಆಗಲಿದೆ.
ಆಹಾರ ಖಾತೆ ಸಚಿವ ಮುನಿಯಪ್ಪ ಸುಳಿವು ಕೊಟ್ಟಿದ್ದು, 13-14 ಲಕ್ಷ ಅನರ್ಹರನ್ನು ತೆಗೆಯೋ ಕೆಲಸ ಮಾಡ್ತೇವೆ ಅಂದಿದ್ದಾರೆ. ಸರ್ಕಾರಿ ನೌಕರಿ ಇರುವ ಕುಟುಂಬಕ್ಕೆ ಗ್ಯಾರಂಟಿ ಕಡಿತ ಮಾಡೋದಕ್ಕೆ ಚಿಂತನೆ ನಡೆಸಿದೆ.
ಈ ಬಗ್ಗೆ ನಿನ್ನೆಯಷ್ಟೇ ನೌಕರರ ಜೊತೆ ಚರ್ಚೆ ಮಾಡ್ತೇನೆ ಎಂದಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್‌ಎಂ ರೇವಣ್ಣ ಇವತ್ತು ಉಲ್ಟಾ ಹೊಡೆದಿದ್ದಾರೆ. ಯಾವುದೇ ಸರ್ಕಾರಿ ನೌಕರರನ್ನು ಗ್ಯಾರಂಟಿಯಿಂದ ಕೈ ಬಿಡಲ್ಲ. ಸತ್ತವರ ಖಾತೆಗಳಿಗೆ ಹಣ ಹೋಗುತ್ತಿರುವುದೇ ಪರಿಷ್ಕರಣೆಯ ಮೂಲವಾಗಿದೆ ಅಂದಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಪ್ರತಿಕ್ರಿಯಿಸಿ, ನಮ್ಮ ಜೊತೆ ಚರ್ಚೆ ಆಗಿಲ್ಲ. ಅವರೇ ಕೊಟ್ಟರು, ಅವರೇ ಕಿತ್ಕೋತಿದ್ದಾರೆ ಅಂದಿದ್ದಾರೆ. ಇನ್ನು, ಗ್ಯಾರಂಟಿ ಪರಿಷ್ಕರಣಾ ಸಮಿತಿಗೆ ಪ್ರತಿವಾರ್ಡ್ ಹಾಗೂ ಪಂಚಾಯ್ತಿಗೆ ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಲು ಮುಂದಾಗಿರೋ ಸಿಎಂ ಡಿಕೆಶಿ ನಿರ್ಧಾರ ಲೂಟಿ ಮಾಡೋಕೆ ಅಂತ ವಿಪಕ್ಷಗಳು ದೂರಿವೆ. ಈ ಮಧ್ಯೆ, ಶೇ.44ರಷ್ಟು ಬಿಎಂಟಿಸಿ, ಶೇ.33ರಷ್ಟು ಕೆಎಸ್‌ಆರ್‌ಟಿಸಿ, ಬಸ್ ಟಿಕೆಟ್ ದರ ಏರಿಕೆಗೆ ಸಾರಿಗೆ ನಿಗಮಗಳು ಪ್ರಸ್ತಾಪ ಮುಂದಿಟ್ಟಿವೆ.
