ChikkamagaluruDistrictsKarnatakaLatest

ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

ಚಿಕ್ಕಮಗಳೂರು: ಮಳೆನಾಡು ಮಲೆನಾಡಲ್ಲಿ ಮಳೆ ಬಹುತೇಕ ಕಡಿಮೆಯಾಗಿದ್ದು, ನಿಂತಲ್ಲೇ ದೇಹವನ್ನ ನಡುಗಿಸುವ ರಣಚಳಿ ಆರಂಭವಾಗಿದೆ. ಆದರೆ ವರ್ಷಪೂರ್ತಿ ನೀರನ್ನು ಹಿಡಿದಿಟ್ಟು ಹರಿಸುವ ಅರಣ್ಯದ ಶಕ್ತಿ ಶೋಲಾ ಕಾಡುಗಳಲ್ಲಿ ನೀರಿನ ಪ್ರಮಾಣ ಹಾಗೆ ಇದ್ದು ಜಲಪಾತಗಳಿಗೆ ನವ ಚೈತನ್ಯ ಬಂದಿದೆ. ಚಂದ್ರದ್ರೋಣ ಪರ್ವತಗಳ ಸೆರಗಲ್ಲಿರುವ ಕಲ್ಲತ್ತಿಗರಿ, ಡೈಮಂಡ್, ಶಬರಿ ಹಾಗೂ ಹೆಬ್ಬೆ ಜಲಪಾತಗಳ ವೈಭೋಗವನ್ನು ನೋಡಲೆರಡು ಕಣ್ಣುಗಳು ಸಾಲದಂತಾಗಿದೆ. ಅದರಲ್ಲೂ, ಚಿಕ್ಕಮಗಳೂರಿನಿಂದ ಅನತಿ ದೂರದಲ್ಲಿರುವ ಕಾಮೇನಹಳ್ಳಿ ಜಲಪಾತ ಬಂಡೆಗಳ ಹಾಲು ಸುರಿಯುತ್ತಿರುವಂತೆ ಭಾಸವಾಗುತ್ತಿದೆ.

ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಜಲಪಾತದಲ್ಲೀಗ ದೃಶ್ಯ ಕಾವ್ಯವೇ ಮನೆ ಮಾಡಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ಗಂಗಾ ಮಾತೆ ಕಾಮೇನಹಳ್ಳಿಯಲ್ಲಿ ಸುಮಾರು 70-90 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದಾಳೆ. ಮೇಲಿಂದ ಶಾಂತವಾಗಿ ಹರಿದು ಬಂದು ಒಮ್ಮೆಲೇ ಎತ್ತರದಿಂದ ಧುಮ್ಮಿಕ್ತಿದ್ದು, ನೀರಿನ ಶಬ್ಧದೊಂದಿಗೆ ಹಕ್ಕಿ-ಪಕ್ಷಿಗಳ ಕಲರವ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಇಲ್ಲಿನ ರಮಣೀಯ ದೃಶ್ಯವನ್ನು ಕಂಡು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ನಾಮಕರಣ ಮಾಡುತ್ತಿದ್ದಾರೆ. ಕೆಲವರು ಡೈಮಂಡ್ ಫಾಲ್ಸ್ ಎಂದರೆ, ಮತ್ತೆ ಕೆಲವರು ಕುಮಾರಗಿರಿ ಫಾಲ್ಸ್ ಅಂತಾರೆ. ಆದರೆ ಈ ಜಲಪಾತ ವಾಟರ್ ಫಾಲ್ಸ್ ಎಂದೇ ಖ್ಯಾತಿ. ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

ಗಿರಿಶ್ರೇಣಿಗಳಲ್ಲಿ ಮಳೆ ನಿಂತರು ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಜಲಪಾತವೀಗ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಗಿರಿ ಮಧ್ಯೆಯಿಂದ ಮಣ್ಣಿನ ಬಣ್ಣದಲ್ಲಿ ಹರಿದು ಬರುವ ನೀರು ಜಲಪಾತದಿಂದ ಧುಮ್ಮಿಕ್ಕುವಾಗ ಹಾಲ್ನೋರೆಯಂತೆ ಭಾಸವಾಗುತ್ತಿರುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಚಿಕ್ಕಮಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ಸರಿಯಾದ ದಾರಿ ಇಲ್ಲ.

ಸಖರಾಯಪಟ್ಟಣದ ಸಮೀಪ ಬರುವ ಈ ಜಲಪಾತಕ್ಕೆ ಹೋಗುವುದು ಕೂಡ ಸವಾಲೇ. ಚಿಕ್ಕಮಗಳೂರಿನಿಂದ ಮಲ್ಲೆನಹಳ್ಳಿ ಮಾರ್ಗವಾಗಿ 30 ಕಿ.ಮೀ. ಸಾಗಿ ಕಾಮೇಹಳ್ಳಿಗೆ ಎಂಟ್ರಿಯಾದರೆ ನೀರಿನ ಶಬ್ಧವೇ ನೋಡುಗರಿಗೆ ದಾರಿ ತೋರಿಸುತ್ತೆ. ಬೈಕ್ ಅಥವಾ ಕಾರು ಯಾವುದನ್ನಾದರು ನಿಲ್ಲಿಸಿ ಸುಮಾರು ಒಂದೂವರೆ ಕಿ.ಮೀ. ನಡೆದರೆ ಈ ಪ್ರಕೃತಿಯ ನೈಜ ಸೊಬಗು ಅನಾವರಣಗೊಳ್ಳುತ್ತೆ. ಇದನ್ನೂ ಓದಿ: ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದೆದ್ದು, ತಮ್ಮದೇ ಲೋಕದಲ್ಲಿ ಸ್ವಚ್ಚಂದವಾಗಿ ಮೈ ಮರೆಯುತ್ತಾರೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು ಇಲ್ಲಿನ ಸೌಂದರ್ಯ ಫಿದಾ ಆಗುತ್ತಿದ್ದಾರೆ. ಇಲ್ಲಿನ ಹತ್ತಾರು ಬಂಡೆಗಳು ಡೈಮಂಡ್ ಆಕೃತಿಯಲ್ಲಿರುವುದರಿಂದ ಈ ಜಲಪಾತವನ್ನು ಡೈಮಂಡ್ ಜಲಪಾತ ಎಂದು ಹೇಳುತ್ತಾರೆ. ಅಲ್ಲದೆ ಕಲ್ಲಿನ ಮೇಲೆ ನಿರಂತರವಾಗಿ ಹರಿಯುವ ನೀರು ನಾನಾ ಆಕಾರದಲ್ಲಿ ಕಲ್ಲನ್ನು ಕೊರೆದಿದೆ. ಇದು ನೋಡುಗರಿಗೆ ಮತ್ತಷ್ಟು ಮುದ ನೀಡ್ತಿದೆ.

ಈ ಸುಂದರ ತಾಣ ಸ್ಥಳಿಯರನ್ನು ಬಿಟ್ಟರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಈ ಜಾಗದ ಬಗ್ಗೆ ಗೊತ್ತಿರುವವರುವೀಕೆಂಡ್‌ನಲ್ಲಿ ಬಂದು ಕೊರೆಯುವ ನೀರಿನಲ್ಲಿ ಮಿಂದೆದ್ದು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇಲ್ಲಿಗೆ ಹೋಗುವುದಕ್ಕೆ ಸೂಕ್ತ ಮಾರ್ಗವಿಲ್ಲ. ಸರ್ಕಾರ ಈ ತಾಣವನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿದ್ರೆ ಪ್ರವಾಸಿಗರು ಕಾಫಿನಾಡಿನ ಸೌಂದರ್ಯವನ್ನು ಸವಿಯಬಹುದು, ಸರ್ಕಾರಕ್ಕೂ ಆದಾಯ ಬರಲಿದೆ.

Leave a Reply

Your email address will not be published.

Back to top button