ಮೈಸೂರು: ರಾಜ್ಯದಲ್ಲಿ ಬರದ ನಡುವೆ ಜನರಿಗೆ ಸಿಹಿ ಸಿಕ್ಕಿದೆ. ನೆರೆಯ ಕೇರಳದ ವಯನಾಡ್ ಭಾಗದಲ್ಲಿ ಹೆಚ್ಚಾದ ಮಳೆಯಿಂದಾಗಿ ಕಬಿನಿ ಜಲಾಶಯ (Kabini Dam) ಭರ್ತಿಯ ಹಂತ ತಲುಪಿದೆ.
ಮೈಸೂರು (Mysuru) ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ, ಇದರಿಂದ ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದೆ.

ಯಾವುದೇ ಕ್ಷಣದಲ್ಲಿ ನದಿಗೆ ನೀರು
ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. 2,284 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗ 2,280 ಅಡಿಯಷ್ಟು ನೀರು ಭರ್ತಿಯಾಗಿದೆ. ಇಂದೇ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಅಣೆಕಟ್ಟೆಯಿಂದ 8 ರಿಂದ 10 ಸಾವಿರ ಕ್ಯೂಸೆಕ್‌ನಷ್ಟು ನೀರು ನದಿಗೆ ಹರಿಸಲು ತಯಾರಿ ಮಾಡಿಕೊಳ್ಳಾಗಿದೆ. ನದಿ ಪಾತ್ರದ ರೈತರಿಗೂ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.
ಇನ್ನೂ 19.52 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಪ್ರಸ್ತುತ 18 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು ಹೆಚ್ಚಳ ಆಗುವ ಸಾಧ್ಯತೆಯೂ ಇದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಬಿನಿ ಜಲಾಶಯದ ಅಧಿಕಾರಿಗಳಿಂದ ಪ್ರವಾಹ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ.

ಇನ್ನೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ವರುಣದೇವ ಕೃಪೆ ತೋರಿದ್ದಾನೆ. ಹಾರಂಗಿ ಅಣೆಕಟ್ಟೆಗೆ 11,800ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಸುರಕ್ಷತಾ ದೃಷ್ಟಿಯಿಂದ 13,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 4 ಕ್ರಸ್ಟ್ ಗೇಟ್, ವಿದ್ಯುತ್ ಘಟಕದ ಮೂಲಕ ನೀರು ರಿಲೀಸ್ ಮಾಡಲಾಗಿದೆ. ಕಾವೇರಿ ನೀರಿನ ಮಟ್ಟದಲ್ಲಿ ಏರಿಕೆ, ನದಿ ಪಾತ್ರದ ರೈತರಿಗೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.
