– ಪ್ರಧಾನ್ ರಾಜೀನಾಮೆ, ವಾಂಗ್ಚುಕ್ ಬಿಡುಗಡೆಗೆ ಪಟ್ಟು; ಹಲವು ಬೇಡಿಕೆ ಮುಂದಿಟ್ಟ ಸಿಜೆಪಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಕಾಕ್ರೋಚ್ ಜನತಾ ಪಕ್ಷ (CJP) ಆಯೋಜಿಸಿದ್ದ ʻಚಲೋ ಸಂಸತ್ʼ ಪ್ರತಿಭಟನೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ಪಕ್ಷದ ಪ್ರತಿನಿಧಿಗಳು ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ, ನೀಟ್ ಯುಜಿ (NEET-UG) ಪರೀಕ್ಷೆಯಲ್ಲಿನ ಅಕ್ರಮಗಳ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಸಿಜೆಪಿ ಪ್ರತಿನಿಧಿಗಳಾದ ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡ್ಡಾ ಅವರ ನಿವಾಸದಲ್ಲಿ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ಹಲವು ಬೇಡಿಕೆಗಳನ್ನ ಪ್ರಸ್ತಾಪಿಸಿದ್ದಾರೆ.
ಸಿಜೆಪಿ ಪ್ರತಿನಿಧಿಗಳೊಂದಿಗೆ ಮಾತುಕತೆ ಬಗ್ಗೆ ಸಚಿವ ಜೆ.ಪಿ ನಡ್ಡಾ ಅವರು ಅಧಿಕೃತ ಮಾಹಿತಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ 11:50 ರಿಂದ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆದಿದ್ದು, ಸಂಜೆ 4 ಗಂಟೆಗೆ ಅವರಿಂದ ಲಿಖಿತ ಮನವಿ ಸ್ವೀಕರಿಸಲಾಗಿದೆ. ಮಾತುಕತೆ ಸೌಹಾರ್ದಯುತವಾಗಿ ನಡೆದಿದ್ದು, ಪ್ರತಿಭಟನೆ ಮುಕ್ತಾಯಗೊಳಿಸುವಂತೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಸಭೆಯ ಬಳಿಕ ಪ್ರಕ್ರಿಯಿಸಿರುವ ಸಿಜೆಪಿ ವಕ್ತಾರ ಸೌರವ್ ದಾಸ್, ತಮ್ಮ ಬೇಡಿಕೆಗಳನ್ನ ಸಚಿವರಿಗೆ ವಿವರವಾಗಿ ತಿಳಿಸಲಾಗಿದೆ. ನಡ್ಡಾ ಅವರು ಈ ವಿಷಯವನ್ನ ಸೂಕ್ತ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಆದಾಗ್ಯೂ ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಅಥವಾ ನಿರ್ಧಾರ ಇದುವರೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಸಲ್ಲಿಸಿದ್ದ PIL ವಜಾಗೊಳಿಸಿದ ಹೈಕೋರ್ಟ್
ನಾನು ಮತ್ತು ಅಶುತೋಷ್ ರಂಕಾ ಮಧ್ಯಾಹ್ನ 12 ಗಂಟೆಯಿಂದಲೇ ಜೆ.ಪಿ ನಡ್ಡಾ ಅವರ ನಿವಾಸದಲ್ಲಿದ್ದೇವೆ. ಧರ್ಮೇಂದ್ರ ಪ್ರಧಾನ್ ಅವರನ್ನ ತಕ್ಷಣ ರಾಜೀನಾಮೆ ಕೊಡಿಸುವುದು ಅಥವಾ ಸಚಿವ ಸ್ಥಾನದಿಂದ ವಜಾಗೊಳಿಸುವುದು ಸೇರಿದಂತೆ ನಮ್ಮ ಎಲ್ಲಾ ಬೇಡಿಕೆಗಳನ್ನ ಸಚಿವರಿಗೆ ತಿಳಿಸಿದ್ದೇವೆ. ಈ ವಿಚಾರವನ್ನ ಸೂಕ್ತ ಮಟ್ಟದಲ್ಲಿ ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆದರೆ, ಇದುವರೆಗೆ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದಿದ್ದಾರೆ ಸೌರವ್ ದಾಸ್.ಇದನ್ನೂ ಓದಿ: ಭಾರತಕ್ಕೆ ಮೊದಲ ಡೆಂಗ್ಯೂ ಲಸಿಕೆ ‘QDENGA’ಗೆ ಅನುಮೋದನೆ
