ಬೆಂಗಳೂರು: ಕ್ವಾಲಿಫೈಯರ್-1 ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಆಘಾತವಾಗಿದೆ. ಸ್ಫೋಟಕ ಆಟಗಾರ ಜಾಕೋಬ್ ಬೆಥೆಲ್ (Jacob Bethell) ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತು ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
🚨 𝙊𝙛𝙛𝙞𝙘𝙞𝙖𝙡 𝘼𝙣𝙣𝙤𝙪𝙣𝙘𝙚𝙢𝙚𝙣𝙩: Jacob Bethell sustained an injury to his left ring finger during our game against PBKS. He will return to England to be assessed ahead of their Test series. ❤️🩹
𝙶𝚎𝚝 𝚠𝚎𝚕𝚕 𝚜𝚘𝚘𝚗, 𝙹𝙱! 🫂 𝚆𝚎’𝚕𝚕 𝚖𝚒𝚜𝚜 𝚑𝚊𝚟𝚒𝚗𝚐 𝚢𝚘𝚞… pic.twitter.com/x6ipurfteA
— Royal Challengers Bengaluru (@RCBTweets) May 23, 2026
ಕಳೆದ ಮೇ 17 ರಂದು ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ನಡೆದ ಪಂದ್ಯದ ವೇಳೆ ಜಾಕೋಬ್ ಬೆಥೆಲ್ ಅದ್ಬುತ ಫೀಲ್ಡಿಂಗ್ ಮಾಡಿದ್ದರು. ಈ ವೇಳೆ ಉಂಗುರದ ಬೆರಳಿಗೆ ಗಾಯವಾಗಿತ್ತು. ಇದರಿಂದ ಮೇ 22 ರಂದು ಹೈದರಾಬಾದ್ ವಿರುದ್ಧ ನಡೆದ ಪಂದ್ಯಕ್ಕೂ ಬೆಥೆಲ್ ಗೈರಾಗಿದ್ದರು. ಆದ್ರೆ ಮುಂಬರುವ ಟೆಸ್ಟ್ ಸರಣಿಗೆ ಮುನ್ನ ಬೆಥೆಲ್ ಅವರು ಇಂಗ್ಲೆಂಡ್ ತಂಡವನ್ನ ಸೇರಿಕೊಳ್ಳಬೇಕಿದೆ. ಆದ್ದರಿಂದ ಅವರು ಮೌಲ್ಯಮಾಪನಕ್ಕಾಗಿ ಇಂಗ್ಲೆಂಡ್‌ಗೆ (England) ಹಿಂದಿರುಗುತ್ತಿದ್ದಾರೆ ಎಂದು ಆರ್‌ಸಿಬಿ ತಿಳಿಸಿದೆ. ಬೇಗ ಗುಣಮುಖರಾಗಿ ʻJB’ ಎಂದು ಆರ್‌ಸಿಬಿ ಶುಭಹಾರೈಸಿದೆ.

ಇದೇ ವರ್ಷಾರಂಭದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಾಕೋಬ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅದ್ರಲ್ಲೂ ಸೆಮಿಫೈನಲ್‌ನಲ್ಲಿ ಜಾಕೋಬ್ ಬೆಥೆಲ್ ಟೀಂ ಇಂಡಿಯಾ ವಿರುದ್ಧವೇ ಶತಕ ಸಿಡಿಸಿದ್ದರು. ಆದ್ರೆ ಈ ಆವೃತ್ತಿಯ ಐಪಿಎಲ್‌ನಲ್ಲಿ ಬೆಥೆಲ್ ಉತ್ತಮ ಪ್ರದರ್ಶನವೇನು ನೀಡಿಲ್ಲ. 7 ಇನ್ನಿಂಗ್ಸ್‌ಗಳಲ್ಲಿ ಆರ್‌ಸಿಬಿ ಪರ ಕೇವಲ 96 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಮೇ 17 ರಂದು ಪಂಜಾಬ್ ವಿರುದ್ಧ ಕೇವಲ 17 ರನ್ ಗಳಿಸಿ ಔಟಾಗಿದ್ದರು. ಆದ್ರೆ ಅದ್ಭುತ ಫೀಲ್ಡಿಂಗ್ ಮೂಲಕ ಪಂದ್ಯ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು ಬೆಥೆಲ್.
ಇಂಗ್ಲೆಂಡ್ ತಂಡವು ಮುಂಬರುವ ಜೂನ್‌ನಿಂದ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಆ ಬಳಿಕ ಜುಲೈ 1 ರಿಂದ ಟೀಂ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಅದಕ್ಕೂ ಮುನ್ನ ಜಾಕೋಬ್ ಬೆಥೆಲ್ ಇಂಗ್ಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೇ 26 ರಂದು ಕ್ವಾಲಿಫೈಯರ್ 1
ಇನ್ನೂ 19 ನೇ ಆವೃತ್ತಿಯ ಕ್ವಾಲಿಫೈಯರ್ 1 ಮೇ 26 ರಂದು ನಡೆಯಲಿದೆ. ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಆರ್‌ಸಿಬಿ ಗುಜರಾತ್ ಟೈಟಾನ್ಸ್ ತಂಡವನ್ನ ಎದುರಿಸಲಿದೆ. ಈ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗಲಿದೆ. ಗೆದ್ದರೆ, ನೇರವಾಗಿ ಫೈನಲ್ ಪ್ರವೇಶಿಸಲಿದೆ.
