ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್ ಫೈನಲ್ ನಡೆಯೋದು ಡೌಟ್?

Public TV
2 Min Read

ಬೆಂಗಳೂರು: 2026ರ ಐಪಿಎಲ್ ಫೈನಲ್ (IPL Final) ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Staidum) ನಡೆಯೋದು ಡೌಟ್ ಎನ್ನಲಾಗುತ್ತಿದೆ.

ಹಾಲಿ ಚಾಂಪಿಯನ್ಸ್ ಆರ್‌ಸಿಬಿಯ ತವರು ತಾಣ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಬೇಕಿರುವ ಫೈನಲ್ ಪಂದ್ಯ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಕರ್ನಾಟಕದ ಎಂಎಲ್‌ಎ, ಎಂಎಲ್‌ಸಿ ಮತ್ತು ಎಂಪಿಗಳಿಗೆ ವಿತರಿಸಲಾಗುತ್ತಿರುವ ಉಚಿತ ಟಿಕೆಟ್‌ನ ವಿಚಾರದಿಂದಾಗಿ ಉಂಟಾಗಿರುವ ವಿವಾದ ಇದಕ್ಕೆಲ್ಲ ಕಾರಣ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲಕ್ನೋ ವಿರುದ್ಧ ಮುಂಬೈಗೆ 6 ವಿಕೆಟ್‌ಗಳ ಜಯ

ಐಪಿಎಲ್‌ನಲ್ಲಿ ವಾಡಿಕೆಯಂತೆ ಹಾಲಿ ಚಾಂಪಿಯನ್‌ಗಳ ತವರು ತಾಣದಲ್ಲಿ ಫೈನಲ್ ಪಂದ್ಯ ನಡೆಯುತ್ತದೆ. ಅದರಂತೆ ಈ ಬಾರಿಯೂ 1 ಪ್ಲೇಆಫ್ ಮತ್ತು ಫೈನಲ್ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ, ಎಂಎಲ್‌ಎ, ಎಂಎಲ್‌ಸಿ ಮತ್ತು ಎಂಪಿ ಹೀಗೆ ಸುಮಾರು 299 ಮಂದಿಗೆ ತಲಾ 2ರಂತೆ ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದ್ದರೂ, ಪ್ರತಿಯೊಬ್ಬರಿಗೆ ತಲಾ 4-5 ಟಿಕೆಟ್ ನೀಡಬೇಕೆನ್ನುವ ಒತ್ತಡ ಕೇಳಿಬರುತ್ತಿದೆ. ಹೀಗಾಗಿ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಈ `ಎಂಎಲ್‌ಎ ಟಿಕೆಟ್ ಕಿರಿಕಿರಿ’ಯಿಂದಲೇ ದೂರ ಉಳಿಯಲು ಬಿಸಿಸಿಐ ಯೋಚಿಸುತ್ತಿದೆ ಎನ್ನಲಾಗಿದೆ.

ಕಳೆದ ಬಾರಿ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾದ ಬಳಿಕ ಚಿನ್ನಸ್ವಾಮಿಯಲ್ಲಿ ಪ್ರಮುಖ ಪಂದ್ಯಗಳೇ ನಿಲುಗಡೆಯಾಗಿದ್ದವು. ಸದ್ಯ ಮತ್ತೆ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿದೆಯಾದರೂ ಈ ಮಧ್ಯೆ ಎಂಎಲ್‌ಎಗಳ ಫ್ರೀ ಟಿಕೆಟ್ ಕಿರಿಕಿರಿ ಜೋರಾಗುತ್ತಿದೆ ಎನ್ನಲಾಗುತ್ತಿದೆ. ರಾಜ್ಯದ ಸುಮಾರು 299 ಜನಪ್ರತಿನಿಧಿಗಳಿಗೆ ತಲಾ 2ರಂತೆ 598 ತಲಾ 4-5ಕ್ಕೆ ಹೆಚ್ಚಿಸಿದರೆ ಕ್ರಿಕೆಟ್ ಸಂಸ್ಥೆಗಳಿಗೆ ಇನ್ನೂ ದೊಡ್ಡ ಹೊರೆಯಾಗುತ್ತದೆ. ಇದೇ ಬಿಸಿಸಿಐಗೆ ತಲೆನೋವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ

ಎಂಎಲ್‌ಎ ಟಿಕೆಟ್ ವಿವಾದ ಶುರುವಾಗಿದ್ದು ಹೇಗೆ?
ಕಾಂಗ್ರೆಸ್ ಎಂಎಲ್‌ಎ ವಿಜಯಾನಂದ್ ಕಾಶಪ್ಪನವರ್ ಸದನದಲ್ಲಿ ಮೊದಲು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಚುನಾಯಿತ ಪ್ರತಿನಿಧಿಗಳಿಗೆ ಐಪಿಎಲ್‌ನ ಉಚಿತ ಟಿಕೆಟ್‌ಗಳನ್ನು ನೀಡಬೇಕು. ಎಂಎಲ್‌ಎಗಳು ಸಾಮಾನ್ಯ ಅಭಿಮಾನಿಗಳಂತೆ ಸರದಿ ನಿಲ್ಲುವುದು, ಸಾಮಾನ್ಯ ಸ್ಟ್ಯಾಂಡ್‌ನಲ್ಲಿ ಪಂದ್ಯ ವೀಕ್ಷಿಸುವುದು ಸಾಧ್ಯವಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಗೆ ವಿಐಪಿ ಟಿಕೆಟ್‌ಗಳನ್ನು ನೀಡಬೇಕೆನ್ನುವುದು ಅವರ ವಾದವಾಗಿತ್ತು. ಹೀಗಾಗಿ ಆರಂಭದಲ್ಲಿ 2 ಟಿಕೆಟ್ ನೀಡಲಾಗಿತ್ತು.ಇದನ್ನೂ ಓದಿ:ಕೆಕೆಆರ್‌ ಆಲ್‌ರೌಂಡ್‌ ಆಟಕ್ಕೆ ಸನ್‌ ಬರ್ನ್‌ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

ಟಿಕೆಟ್ ಹೆಚ್ಚಿಸಬೇಕೆನ್ನುವ ಒತ್ತಡ ಹೆಚ್ಚಿದಾಗ ತಲಾ 3ರಂತೆ ಟಿಕೆಟ್ ವಿತರಿಸಲು ಒಪ್ಪಲಾಗಿತ್ತು. ಆದರೂ ಬಿಡದ ಎಂಎಲ್‌ಎಗಳು ಒಬ್ಬರಿಗೆ ತಲಾ 4-5 ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಮಹಾರಾಷ್ಟ್ರ ಗುಜರಾತ್ ಮತ್ತು ದೆಹಲಿಯಲ್ಲಿ ಶೇ.50-60ರಷ್ಟು ಟಿಕೆಟ್‌ಗಳನ್ನು ಸರ್ಕಾರದ ಅಧಿಕಾರಿಗಳಿಗೆ ನೀಡಲಾಗುತ್ತದೆ. ಹೀಗಾಗಿ ಇಲ್ಲಿ ತಲಾ 4-5 ಟಿಕೆಟ್ ವಿತರಿಸಿದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯೇ ಎನ್ನುವ ವಾದವೂ ನಡೆಯುತ್ತಿದೆ ಎನ್ನಲಾಗಿದೆ.

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಬಿಸಿಸಿಐನಿಂದ ಶೀಘ್ರವೇ ಪ್ರಕಟಗೊಳ್ಳಲಿದೆ. ಪ್ಲೇಆಫ್ ಅಥವಾ ಫೈನಲ್ ಪಂದ್ಯವನ್ನು ಚಿನ್ನಸ್ವಾಮಿಯಲ್ಲಿ ಆಯೋಜಿಸುವುದು ಬಿಸಿಸಿಐಗೆ ಬಿಟ್ಟಿದ್ದು, ತಾಣಗಳ ನಿರ್ಧಾರವನ್ನು ಬಿಸಿಸಿಐ ಮಾಡಲಿದೆ. ಆದರೆ ಫೈನಲ್ ಪಂದ್ಯ ಇಲ್ಲಿಂದ ಸ್ಥಳಾಂತರವಾಗಲಿದೆ ಎನ್ನುವ ಬಗ್ಗೆ ನಮ್ಮಲ್ಲಿ ಮಾಹಿತಿಯಿಲ್ಲ ಎಂದು ಕೆಎಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದರು.ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡಿದ್ದ ಅಭಿಮಾನಿಗೆ ವಿವಿಐಪಿ ಟಿಕೆಟ್ ನೀಡಿದ ಪ್ರೀತಿ ಜಿಂಟಾ

Share This Article