ಮುಂಬೈ: ಭಾರತದ ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi) ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹಾಗೂ ಅಮೋಘ ಆತ್ಮವಿಶ್ವಾಸದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಕ್ರೀಡಾಂಗಣದಲ್ಲಿ 28 ಅಥವಾ 30 ವರ್ಷದ ಅನುಭವಿಯಂತೆ ಬ್ಯಾಟ್ ಬೀಸುವ ಈ ಯುವ ಆಟಗಾರನ ವಯಸ್ಸಿನ ಕುರಿತು ಆರಂಭದಲ್ಲಿ ಹಲವು ಪ್ರಶ್ನೆಗಳು ಎದ್ದಿದ್ದವು. ಇದೀಗ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಿಗ್ಗಜ ಬ್ರೆಟ್ ಲೀ(Brett Lee) ಕೂಡ ಈ ವಿಷಯದ ಕುರಿತು ಮಾತನಾಡಿದ್ದಾರೆ.
ಸೂರ್ಯವಂಶಿ ಅವರ ವಯಸ್ಸಿನ ಕುರಿತು ಭಾರತದಿಂದ ಹೊರಗಿನ ದೇಶಗಳಲ್ಲೂ ಭಾರಿ ಚರ್ಚೆಗಳು ನಡೆಯುತ್ತಿವೆ ಎಂದು ಒಪ್ಪಿಕೊಂಡಿರುವ ಬ್ರೆಟ್ ಲೀ, “ಆತನಿಗೆ 15 ವರ್ಷವೋ, 16, 17 ಅಥವಾ 18 ವರ್ಷವೋ ಎಂಬುದು ಮುಖ್ಯವಲ್ಲ, ಆತ ಉನ್ನತ ಮಟ್ಟದ ಕ್ರಿಕೆಟ್ ಆಡಬಲ್ಲ ಎಂಬುದಷ್ಟೇ ಮುಖ್ಯ” ಎಂದು ಸ್ಪಷ್ಟಪಡಿಸಿದ್ದಾರೆ.


ರಣವೀರ್ ಅಲ್ಲಾಹಬಾಡಿಯಾ ಜೊತೆ ಮಾತನಾಡಿದ ಅವರು, ಭಾರತದಿಂದ ಹೊರಗಿರುವ ಪ್ರತಿಯೊಬ್ಬರೂ ಆತನಿಗೆ ನಿಜಕ್ಕೂ 15 ವರ್ಷವೇ?’ ಎಂದು ಆಶ್ಚರ್ಯದಿಂದ ಕೇಳುತ್ತಿದ್ದಾರೆ. ಪ್ರಪಂಚದಾದ್ಯಂತ ಪ್ರಸ್ತುತ ಇದೇ ದೊಡ್ಡ ಚರ್ಚೆಯ ವಿಷಯವಾಗಿದೆ. ಆದರೆ ಆತನ ವಯಸ್ಸು ಎಷ್ಟೇ ಇದ್ದರೂ ನನಗೆ ಚಿಂತೆಯಿಲ್ಲ. 15 ವರ್ಷವಾಗಿದ್ದರೆ ಅತ್ಯುತ್ತಮ, ಒಂದು ವೇಳೆ 17 ಅಥವಾ 18 ಆಗಿದ್ದರೂ ತೊಂದರೆಯಿಲ್ಲ. ಈ ಹುಡುಗ ಅತ್ಯುತ್ತಮವಾಗಿ ಕ್ರಿಕೆಟ್ ಆಡುತ್ತಾನೆ. ಭಾರತಕ್ಕೆ ಸಿಕ್ಕ ದೊಡ್ಡ ಆಸ್ತಿ ಎಂದು ಹೊಗಳಿದ್ದಾರೆ. ಇದನ್ನೂ ಓದಿ: 2027ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಅಫ್ಘಾನ್ – 2 ಬಾರಿ ಚಾಂಪಿಯನ್ ವಿಂಡೀಸ್‌ಗೆ ಮುಖಭಂಗ
ಸೂರ್ಯವಂಶಿಯವರ ಸಿಕ್ಸರ್ ಬಾರಿಸುವ ಸಾಮರ್ಥ್ಯದ ಬಗ್ಗೆ ಮಾತನಾಡಿದ ಲೀ, ಒಬ್ಬ ಬ್ಯಾಟರ್ ಹುಕ್ ಹಾಗೂ ಪುಲ್ ಶಾಟ್‌ಗಳನ್ನು ಚೆನ್ನಾಗಿ ಆಡಿದರೆ ನನಗೆ ಬೌಲಿಂಗ್ ಮಾಡಲು ತುಂಬಾ ಇಷ್ಟ. ಏಕೆಂದರೆ ಆಗಿಬ್ಬರ ನಡುವೆ ನೈಜ ಸ್ಪರ್ಧೆ ಏರ್ಪಡುತ್ತದೆ. ನಾನು ಆತನಿಗೆ ಬೌಲಿಂಗ್ ಮಾಡುತ್ತಿದ್ದರೆ ಖಂಡಿತಾ ದೇಹಕ್ಕೆ ತಗಲುವಂತೆ ಬೌನ್ಸರ್ ಎಸೆಯುತ್ತಿದ್ದೆ. ಆತ ಅದನ್ನು ಸಿಕ್ಸರ್ ಬಾರಿಸಿದರೂ, ನಾನು ಮತ್ತೆ ಬೌನ್ಸರ್ ಎಸೆಯಲು ಹಿಂಜರಿಯುತ್ತಿರಲಿಲ್ಲ ಎಂದು ತಮ್ಮ ಬೌಲಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

