ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಂಬರುವ ಆವೃತ್ತಿಗೆ ಮುನ್ನ ಫ್ರಾಂಚೈಸಿಗಳ ನಡುವೆ ಹೈ-ಪ್ರೊಫೈಲ್ ಆಟಗಾರರ ಅದಲು-ಬದಲು ಪ್ರಕ್ರಿಯೆ ಜೋರಾಗಿ ನಡೆದಿದ್ದು, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳ ನಡುವೆ ಅದಲು-ಬದಲಾಗಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್(Rishabh Pant) ಅವರು ಮತ್ತೊಮ್ಮೆ ತಮ್ಮ ಹಳೆಯ ಫ್ರಾಂಚೈಸಿ ಆದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಬರೋಬ್ಬರಿ 15 ಕೋಟಿ ರೂ.ಗಳ ಮೊತ್ತಕ್ಕೆ ಪಂತ್ ಅವರನ್ನು ಡೆಲ್ಲಿ ತಂಡವು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
2025ರ ಮೆಗಾ ಹರಾಜಿನಲ್ಲಿ ಲಕ್ನೋ ತಂಡ 27 ಕೋಟಿ ರೂ. ನೀಡಿ ಪಂತ್ ಅವರನ್ನು ಖರೀದಿಸಿತ್ತು. ಆದರೆ ಈಗ ಪಂತ್ ತಮ್ಮ ವೇತನದಲ್ಲಿ12 ಕೋಟಿ ರೂ. ಕಡಿಮೆ ಮಾಡಿ ಡೆಲ್ಲಿ ತಂಡವನ್ನು ಸೇರುತ್ತಿರುವುದು ವಿಶೇಷ.
ಮತ್ತೊಂದೆಡೆ ಈ ಹೈ-ಪ್ರೊಫೈಲ್ ಟ್ರೇಡಿಂಗ್ ಒಪ್ಪಂದದ ಭಾಗವಾಗಿ ಭಾರತ ತಂಡದ ಖ್ಯಾತ ಸ್ಪಿನ್ನರ್ ಕುಲದೀಪ್ ಯಾದವ್(Kuldeep Yadav) ಅವರು ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿದ್ದಾರೆ. ಹಳೆಯ ವೇತನವಾದ 13.5 ಕೋಟಿ ರೂ.ನೀಡಿ ಕುಲದೀಪ್ ಯಾದವ್ ಅವರನ್ನು ಲಕ್ನೋ ಫ್ರಾಂಚೈಸಿಯು ತನ್ನ ತಂಡಕ್ಕೆ ಬರಮಾಡಿಕೊಂಡಿದೆ. ಲಕ್ನೋ ತಂಡದ ಸ್ಪಿನ್ ವಿಭಾಗಕ್ಕೆ ಕುಲದೀಪ್ ಸೇರ್ಪಡೆಯಿಂದ ದೊಡ್ಡ ಬಲ ಬಂದಂತಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೂ ಪಂತ್ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿಲ್ಲ. ಅವರು ಕೇವಲ ಒಬ್ಬ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಆಡಲಿದ್ದಾರೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಸಪೋರ್ಟ್ ಸ್ಟಾಫ್‌ನಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಮಾಜಿ ಆಟಗಾರ ಯುವರಾಜ್ ಸಿಂಗ್ 2027ರ ಸೀಸನ್‌ಗೆ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
