ಇನ್ನೇನು ‘ಸಿಟಾಡೆಲ್’ (Citadel) ವೆಬ್ ಸರಣಿ ಸ್ಟ್ರೀಮಿಂಗ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಲಿವುಡ್ ನಲ್ಲಿ ಇದಕ್ಕೆ ಸಿಟಾಡೆಲ್ ಎಂದು ಕರೆದರೆ, ಇಂಡಿಯನ್ ವರ್ಷನ್ ನಲ್ಲಿ ಅದಕ್ಕೆ ಹನಿ ಬನಿ (Honey Bani) ಎಂದು ಕರೆಯಲಾಗಿದೆ. ಸಮಂತಾ ಮುಖ್ಯ ಭೂಮಿಕೆಯ ಈ ಸರಣಿ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ.
ಹಲವಾರು ನೋವುಗಳ ಮಧ್ಯೆ ಸಮಂತಾ (Samantha) ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಮೈಯೋಸಿಟಿಸ್ ಖಾಯಿಲೆಯನ್ನು ಪಕ್ಕಕ್ಕೆ ಇಟ್ಟು ಹೊಸ ಸಾಹಸದ ಮೊದಲ ಝಲಕ್ ತೋರಿಸಿದ್ದಾರೆ. ಇನ್ನೇನು ಸ್ಯಾಮ್ ಬಣ್ಣದ ಲೋಕದ ಬದುಕು ಮುಗಿಯಿತು. ಹೀಗಂತ ಅಂದುಕೊಂಡವರಿಗೆ ಭರ್ಜರಿ ಕಾಣಿಕೆ ಕೊಡಲು ಸಜ್ಜಾಗಿದ್ದಾರೆ.
ಸಮಂತಾಗೆ ಎರಡು ವರ್ಷ ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಮೊದಲ ಕಾರಣ ಎಲ್ಲರಿಗೂ ಗೊತ್ತು. ಅದು ವರ್ಷದಿಂದ ಕಾಡುತ್ತಿರುವ ಮೈಯೋಸೀಟಿಸ್. ಅದರಿಂದ ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆ ಪಡೆದು ಬಂದರು. ಅದಕ್ಕಾಗಿ ಸಿನಿಮಾ ರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಭಕ್ತಗಣದ ಜೊತೆ ಸಂಪರ್ಕದಲ್ಲಿದ್ದರು. ಇದೀಗ ಸಿಟಾಡೆಲ್ ಮೂಲಕ ಮತ್ತೆ ಮೋಡಿ ಮಾಡಲಿದ್ದಾರೆ.
ಈಗ ಹೊಸದೊಂದು ಯುದ್ಧ ಮುಗಿಸಿ ಬಂದಿದ್ದಾರೆ. ಸದ್ಯದಲ್ಲೇ ಇವರ ವೆಬ್ಸೀರೀಸ್ ಸಿಟಾಡೆಲ್ ಓಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಒಂದು ಗೆಲುವಿಗೆ ಸ್ಯಾಮ್ ಕಾದಿದ್ದಾರೆ. ಕಾರಣ ಈ ಹಿಂದಿನ ಎರಡು ಮೂರು ಸಿನಿಮಾ ಕೈ ಹಿಡಿಯಲಿಲ್ಲ. ಇದಾದಾದರೂ ಗೆದ್ದು ಬೀಗುತ್ತದಾ? ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಬಾಲಿವುಡ್ ಹೀರೋ ವರುಣ್ ಧವನ್ (Varun Dhawan) ಜೊತೆ ಸಮಂತಾ ಕೈ ಜೋಡಿಸಿದ್ದಾರೆ. ಫ್ಯಾಮಿಲಿಮ್ಯಾನ್ ಸರಣಿ ನಿರ್ದೇಶಿಸಿದ್ದ ಡಿಕೆ ಇದರ ಸಾರಥಿ. ಹಾಲಿವುಡ್ ಸರಣಿಯ ಹಿಂದಿ ರಿಮೇಕ್ ಇದು. `ಈಗಾಗಲೇ ಸರಣಿಯ ಕೆಲವು ದೃಶ್ಯ ನೋಡಿದ್ದೇನೆ. ಅದ್ಭುತವಾಗಿದೆ. 22 ತಿಂಗಳ ಕಷ್ಟ ಕಾಣುತ್ತಿದೆ. ಜನರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ…’ ಹೀಗಂತ ಬರೆದುಕೊಂಡಿದ್ದರು ಸಮಂತಾ.