ಕಾರವಾರ: ಪ್ರವಾಸಿ ತಾಣವಾದ ದಾಂಡೇಲಿಯ (Dandeli) ಕಾಳಿ ನದಿಯಲ್ಲಿ ಮೊಸಳೆಗಳು ಏರಿಕೆ ಕಂಡಿವೆ. ಜಲಸಾಹಸ ಕ್ರೀಡೆ, ಪ್ರವಾಸಕ್ಕೆ ಪ್ರವಾಸಿಗರಿಗೆ ಆಡಳಿತ ಎಚ್ಚರಿಕೆ ನೀಡಿದೆ.
ಕಳೆದ ಹತ್ತು ವರ್ಷದ ಹಿಂದೆ ವಿರಳವಾಗಿದ್ದ ಕಾಳಿ ನದಿಯ (Kali River) ಮೊಸಳೆಗಳು ಇದೀಗ ತನ್ನ ಸಂತಾನವೃದ್ಧಿ ಮಾಡಿಕೊಂಡಿವೆ. ಅದರ ಜೊತೆಗೆ ದಾಂಡೇಲಿ ಎಂಬ ಪುಟ್ಟ ಊರು ಪರಿಸರ ಹಾಗೂ ಜಲಸಾಹಸ ಕ್ರೀಡೆಗೆ ಪ್ರಸಿದ್ಧಿ ಪಡೆದು ತನ್ನ ಕ್ಷೇತ್ರವನ್ನು ಕಾಳಿ ನದಿಯ ತಟದವರೆಗೂ ವೃದ್ದಿಸಿಕೊಂಡಿವೆ. ಇದರ ಪರಿಣಾಮ ಕಾಳಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾದರೆ, ದಾಂಡೇಲಿಯಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಕೇವಲ ದಾಂಡೇಲಿಯ ದಾಂಡೇಲಪ್ಪ ದೇವಸ್ಥಾನ ಭಾಗದ ನದಿ ತೀರಭಾಗದಲ್ಲಿ ಇದ್ದ ಮೊಸಳೆಗಳು ಇದೀಗ ಜೋಯಿಡಾ ಭಾಗದ ಗಣೇಶ ಗುಡಿ ಭಾಗದವರಿಗೂ ತನ್ನ ಗಡಿಯನ್ನು ಹೆಚ್ಚಿಸಿಕೊಂಡಿದೆ. ಇದರ ಪರಿಣಾಮ ವರ್ಷಕ್ಕೊಮ್ಮೆ ಅಥವಾ ಒಂದೆರೆಡು ಬಾರಿ ಪ್ರಾಣಿಗಳ ಜೊತೆ ಜನರೂ ಮೊಸಳೆಗೆ ಆಹಾರವಾಗುತಿದ್ದಾರೆ. ಇದನ್ನೂ ಓದಿ: 2,500 ರೂ. ಬರ ಪರಿಹಾರಕ್ಕೆ 17 ಷರತ್ತು ವಿಧಿಸಿದ ರಾಜ್ಯ ಸರ್ಕಾರ – ಯಾರು ಪರಿಹಾರಕ್ಕೆ ಅರ್ಹರು?
ದಾಂಡೇಲಿಯಿಂದ ಜೋಯಿಡಾ ಭಾಗದ ಗಣೇಶಗುಡಿಯ ಕಾಳಿ ನದಿ ತಟದಲ್ಲಿ ಇದೀಗ ರೆಸಾರ್ಟ್, ಹೋಮ್ ಸ್ಟೇಗಳು ಹೆಚ್ಚಾಗಿವೆ. ಇದರಿಂದ ನದಿ ಪಾತ್ರದಲ್ಲಿ ತ್ಯಾಜ್ಯಗಳು ಹಾಗೂ ಉಳಿದ ಆಹಾರ ಪದಾರ್ಥಗಳು ನದಿ ಒಡಲು ಸೇರುತ್ತಿವೆ. ಈ ಹಿಂದೆ ಮೊಸಳೆಗಳು ದಾಂಡೇಲಿಯ ಕಾರ್ಖಾನೆಯಿಂದ ಹೊರಬರುವ ಕೊಳೆತ ಪದಾರ್ಥವನ್ನ ತಿಂದು ಬದುಕುತಿದ್ದವು. ಆದರೆ, ಇದೀಗ ಇವುಗಳ ಸಂಖ್ಯೆ ಹೆಚ್ಚಾದ್ದರಿಂದ ಮೊಸಳೆಗಳು ನದಿ ಬಿಟ್ಟು ಊರಕಡೆ ಬಂದರೇ, ನದಿ ಭಾಗದ ಇತರೆ ಭಾಗಕ್ಕೂ ಅವುಗಳು ಸಂಚರಿಸುತ್ತಿವೆ. ಇದರಿಂದಾಗಿ ಜಿಲ್ಲಾಡಳಿತ ನಿಗದಿಪಡಿಸಿದ ಜಲಸಾಹಸ ಕ್ರೀಡೆ ನಡೆಯುವ ಸ್ಥಳಗಳು ಸಹ ಮೊಸಳೆಗಳ ಪಾಲಾಗಿದ್ದು, ಇದೀಗ ಆಡಳಿತ ಸಹ ಪ್ರವಾಸಿಗರಿಗೆ ನಿಗದಿ ಸ್ಥಳ ಬಿಟ್ಟು ಇತರೆ ಸ್ಥಳದಲ್ಲಿ ಈಜದಂತೆ ಹಾಗೂ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಈ ಹಿಂದೆ ದಾಂಡೇಲಿಯ ಮೊಸಳೆ ಪಾರ್ಕ್ನಲ್ಲಿ ಮಾತ್ರ ಹೆಚ್ಚು ಮೊಸಳೆಗಳು ನೋಡಸಿಗುತ್ತಿದ್ದವು. ಆದರೆ, ಇದೀಗ ದಾಂಡೇಲಿಯಿಂದ ಗಣೇಶಗುಡಿವರೆಗೂ ಮೊಸಳೆಗಳು ಕಾಣಸಿಗುತ್ತಿವೆ. ಅರಣ್ಯ ಇಲಾಖೆ ಹಲವು ಕಡೆ ಎಚ್ಚರಿಕೆಯ ನಾಮಫಲಕ ಹಾಕಿ ನೀರಿಗೆ ಇಳಿಯದಂತೆ ಸೂಚಿಸಿದ್ದಾರೆ. ಆದರೆ, ಹಲವು ಕಡೆ ನಾಮಫಲಕ ಇಲ್ಲದೇ ಜನ ನದಿಗೆ ಇಳಿದು ಈಜುವುದು, ಮೋಜು-ಮಸ್ತಿ ಮಾಡುತ್ತಿದ್ದಾರೆ. ಜೊತೆಗೆ ಮೊಸಳೆ ನೋಡಿ ಕಲ್ಲು ಹೊಡೆಯುವುದು, ಆಹಾರ ನೀಡುವುದನ್ನ ಮಾಡುತ್ತಿದ್ದು, ಇದರಿಂದ ಮೊಸಳೆಗಳು ಪ್ರವಾಸಿಗರು ಬರುವ ಸ್ಥಳದಲ್ಲಿಯೇ ಇರುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಮೊಸಳೆ ಬಾಯಿಗೆ ಆಹಾರ ಆಗುವ ಸಾಧ್ಯತೆ ಇದ್ದು, ಮೋಜು-ಮಸ್ತಿ ನೆಪದಲ್ಲಿ ಬರುವ ಜನ ಎಚ್ಚರದಿಂದಿರಬೇಕು ಎಂಬುದು ಸ್ಥಳೀಯರ ಮಾತು. ಇದನ್ನೂ ಓದಿ: 15 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ – ಗ್ರಾಪಂ ಕಚೇರಿ ಮುಂದೆ ಬಿಂದಿಗೆ ಹಿಡಿದು ಹೋರಾಟ
ದಾಂಡೇಲಿ ಕಾಳಿ ನದಿಯಲ್ಲಿ ನೂರಕ್ಕೂ ಹೆಚ್ಚು ಮೊಸಳೆಗಳು ಕಣ್ಣು ಹಾಯಿಸಿದರೆ ಕಾಣುತ್ತದೆ. ಆದರೆ, ಈಗ ಎಷ್ಟಿವೆ ಮೊಸಳೆಗಳು ಎಂಬ ಬಗ್ಗೆ ಅರಣ್ಯ ಇಲಾಖೆ ಸಹ ಅಧ್ಯಯನ ನಡೆಸಿಲ್ಲ. ನಗರದ ಪ್ರಮುಖ ಭಾಗದಲ್ಲಿ ಮೊಸಳೆಗಳು ಬಾರದಂತೆ ಕಬ್ಬಿಣದ ಸಲಾಕೆ, ಜರಡಿ ಹಾಕಲಾಗಿದೆ. ಆದರೂ ಹಲವು ಮೊಸಳೆಗಳು ಊರಿಗೆ ನುಗ್ಗಿ ಸದ್ದು ಮಾಡುತ್ತಿವೆ. ಹೀಗಾಗಿ, ಕಾಳಿ ನದಿ ತೀರಭಾಗವನ್ನು ಮೊಸಳೆ ಸಂರಕ್ಷಿತ ಸ್ಥಳ ಮಾಡುವ ಜೊತೆಗೆ ಸ್ಥಳೀಯ ಜನರಿಗೂ ಆರ್ಥಿಕ ಬಲನೀಡುವ ದೃಷ್ಟಿಯಲ್ಲಿ ಪ್ರವಾಸೋದ್ಯಮ ರೂಪದಲ್ಲಿ ಅಭಿವೃದ್ಧಿ ಪಡಿಸುವ ಜೊತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
