ಬೆಂಗಳೂರು: ನಷ್ಟದ ಕಾರಣಕ್ಕಾಗಿ ಸದ್ಯಕ್ಕೆ ಸ್ಥಗಿತಗೊಂಡಿರುವ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆಯನ್ನ ಸದ್ಯದಲ್ಲೇ ನಡೆಯಲಿರುವ ಉಡಾನ್ ಬಿಡ್ಡಿಂಗ್ (UDAN Bidding) ಪ್ರಕ್ರಿಯೆಯಲ್ಲಿ ಸೇರಿಸಬೇಕು. ವಿಮಾನಸೇವೆಯ ಪುನಾರಂಭವು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಗತಿಗೆ ನಿರ್ಣಾಯಕವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
ಈ ಸಂಬಂಧವಾಗಿ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಜೂನ್‌ನಲ್ಲಿ 9.19 ಟಿಎಂಸಿ ನೀರು – 81 ಅಡಿಗೆ ಕುಸಿದ KRS ನೀರಿನ ಮಟ್ಟ

ಶಿವಮೊಗ್ಗ ವಿಮಾನ ನಿಲ್ದಾಣವು (Shiamogga Airport) 2023ರ ಫೆಬ್ರವರಿಯಲ್ಲಿ ಕಾರ್ಯಾರಂಭ ಮಾಡಿತು. ಇದಾದ ಮೇಲೆ ಇಂಡಿಗೋ ಸಂಸ್ಥೆಯು ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಕೆಲ ತಿಂಗಳಿನಿಂದ ಇದು ಸ್ಥಗಿತಗೊಂಡಿದ್ದು, ತೊಂದರೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಆರ್ಥಿಕ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಇದರಿಂದ ಹಾನಿಯಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರು ನಗರಕ್ಕೆ ನೇರ ವಿಮಾನ ಇಲ್ಲದೇ ಇರುವುದರಿಂದ ದೇಶದ ಬೇರೆ ಬೇರೆ ಭಾಗಗಳು ಮತ್ತು ವಿದೇಶಗಳಿಗೆ ಹೋಗುವವರಿಗೂ ತೊಂದರೆಯಾಗಿದೆ. ಆದ್ದರಿಂದ ವಿಜಿಟಿ ಫಂಡ್ ನೆರವಿನ ಮೂಲಕ ಉಡಾನ್ ಯೋಜನೆಯ ಉದ್ದೇಶಿತ ಬಿಡ್ ನಲ್ಲಿ ಈ ಮಾರ್ಗದ ಸೇರ್ಪಡೆ ಮಾಡಲು ತಾವು ಮಧ್ಯೆ ಪ್ರವೇಶಿಸಬೇಕು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಕುರುಬ ಸಮುದಾಯಕ್ಕೆ ಅತಿಹೆಚ್ಚು ಅನುದಾನ – ಹಿಂದುಳಿದ ವರ್ಗಗಳ ಇಲಾಖೆಯಿಂದ ತಾರತಮ್ಯ ಆರೋಪ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಒದಗಿಸುವ ಕಾಮಗಾರಿ ಭರದಿಂದ ಸಾಗಿದೆ. ಇದಲ್ಲದೇ, ಉಳಿದ ಎಲ್ಲಾ ಸೌಲಭ್ಯಗಳೂ ಇಲ್ಲಿ ಈಗಾಗಲೇ ಇವೆ. ಆದ್ದರಿಂದ ಈ ಮನವಿಯನ್ನ ಗಂಭೀರವಾಗಿ ಪರಿಗಣಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಪಾಟೀಲ್ ಕೋರಿದ್ದಾರೆ. ಇದನ್ನೂ ಓದಿ: ದೀದಿ ನಿಮಗೆ ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ಆರಿಸಿಕೊಳ್ಳಿ – ಸಂಸದ ಕಲ್ಯಾಣ್ ಬ್ಯಾನರ್ಜಿ ಗರಂ
