– ಆದೇಶ ಪರಿಶೀಲಿಸುವಂತೆ ಸಿಎಂ ಡಿಕೆಶಿಗೆ ಪ್ರಣವಾನಂದ ಶ್ರೀ ಮನವಿ
ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುದಾನ ಮಂಜೂರು ಮಾಡುವ ವಿಚಾರದಲ್ಲಿ ತಾರತಮ್ಯ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿಗಳು (Pranavananda Swamiji) ದಾಖಲೆ ಸಮೇತ ತಾರತಮ್ಯ ಆರೋಪ ಮಾಡಿದ್ದಾರೆ.
155 ವಿವಿಧ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನ ಮಂಜೂರು ಮಾಡಲಾಗಿದೆ. ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣ ಸ್ವೀಕಾರಕ್ಕೆ ಒಂದು ದಿನ ಮೊದಲೇ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಈ ಆದೇಶ ಹೊರಡಿಸಿದೆ. ಇದರಲ್ಲಿ ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟ ಬಜೆಟ್‌ನ 52% ಅನುದಾನ ಕೆಲವೇ ಸಮುದಾಯದ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ.
2026-27 ಸಾಲಿನ ಬಜೆಟ್ ನಲ್ಲಿ ವಿವಿಧ ಸಮುದಾಯಗಳ ಸಮುದಾಯ ಭವನಕ್ಕೆ 136 ಕೋಟಿ ರೂ. ಅನುದಾನವನ್ನ ರಾಜ್ಯ ಸರ್ಕಾರ ಮೀಸಲಿಟ್ಟಿತ್ತು. ಈ ಪೈಕಿ 52% ಅನುದಾನ 3-4 ಸಮುದಾಯಗಳಿಗೆ ಮಾತ್ರ ಮಂಜೂರು ಮಾಡಲಾಗಿದೆ. ಮಡಿವಾಳ ಸಮುದಾಯ 8 ಸಂಘಗಳು, ಯಾದವ ಸಮುದಾಯದ 2 ಸಂಘಗಳು, ಹೆಳವ ಸಮುದಾಯ ಮತ್ತು ಸವಿತಾ ಸಮಾಜದ ತಲಾ ಒಂದೊಂದು ಸಂಘ ಹಾಗೂ ಟೀ ನರಸೀಪುರ ಒಂದೇ ತಾಲೂಕಿಗೆ 13 ಸಮುದಾಯ ಭವನಗಳನ್ನ ಮಂಜೂರು ಮಾಡಲಾಗಿದೆ.
ಆದರೆ ಕುರುಬ ಸಮುದಾಯದ (Kuruba Community) 89 ಸಂಘ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಾಗಿದೆ. ಗದಗದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್‌ಗೂ 50 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಮಂಜೂರಾದ ಅನುದಾನದ ಪೈಕಿ 89 ಸಂಸ್ಥೆಗಳು ಒಂದೇ ಸಮುದಾಯಕ್ಕೆ (ಕುರುಬ) ಸೇರಿವೆ. ಇದರಿಂದ ಹಿಂದುಳಿದ ವರ್ಗಗಳಲ್ಲಿ ಬೇರೆ ಸಮುದಾಯ ಇಲ್ವಾ? ಅನ್ನೋ ಪ್ರಶ್ನೆ ಮೂಡಿದೆ.
ಹಿಂದುಳಿದ ವರ್ಗಗಳ ಸಮುದಾಯಗಳ ಪಟ್ಟಿಯಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಪ್ರವರ್ಗ-1 ರಲ್ಲಿಯೇ – 147 ಜಾತಿಗಳಿವೆ. ಇವೆಲ್ಲವನ್ನೂ ಕಡೆಗಣಿಸಿ ತರಾತುರಿಯಲ್ಲಿ ಅನುದಾನ ಮಂಜೂರು ಮಾಡಿದ್ದೇಕೆ? ಎಂಬ ಅನುಮಾನ ಮೂಡಿದೆ. ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೇ ಮಾತ್ರ ಅನುದಾನದ ಕೊಡುಗೆ, ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ವೇಳೆ ತರಾತುರಿಯಲ್ಲಿ ಆದೇಶ ಮಾಡಿದ್ರಾ ಅನ್ನೋದು ಪ್ರಶ್ನೆಯೂ ಎದ್ದಿದೆ.

ಈ ಕುರಿತು ಈಡಿಗ ಸಮಾಜದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ ಕುರುಬ ಸಮುದಾಯಕ್ಕೆ 60-70% ಅನುದಾನ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಮಡಿವಾಳ, ಉಪ್ಪಾರ, ಒಕ್ಕಲಿಗ ಸಮಾಜಕ್ಕೂ ಒಂದಿಷ್ಟು ಅನುದಾನ ನೀಡಿದ್ದಾರೆ. ರಾಜ್ಯ ಸರ್ಕಾರ ಯಾರಿಗೆ ಕೊಟ್ಟರೂ ನಮ್ಮ ವಿರೋಧವಿಲ್ಲ. ಆದ್ರೆ ಹಿಂದುಳಿದ ವರ್ಗದಲ್ಲಿ ಕುರುಬ ಅಷ್ಟೇ ಅಲ್ಲ, ಈಡಿಗ, ಉಪ್ಪಾರ, ಶಿವಸಿಂಬಿ, ತಿಗಳ ಅಂತಹ ಸಮುದಾಯಗಳಿವೆ. ಆದ್ರೂ ಕುರುಬ ಸಮಾಜಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ.
ಅಹಿಂದ ಎಲ್ಲಿದೆ?
ಸಿದ್ದರಾಮಯ್ಯನವರೇ ತಾವು ಸಮಾನತೆ, ಸಾಮಾಜಿಕ ನ್ಯಾಯ, ಅಹಿಂದ ಅಂತ ಹೇಳಿಕೊಳ್ತೀರಿ. ಇದರಲ್ಲಿ ಯಾವ ಅಹಿಂದ ಇದೆ? ಜಾತಿ ಹೇಗೆ ಕಟ್ಟಬೇಕು, ತನ್ನ ಜಾತಿಗೆ ಹೇಗೆ ಸಹಾಯ ಮಾಡಬೇಕು? ಅನ್ನೋದನ್ನ ಸಿದ್ದರಾಮಯ್ಯ ಅವರಿಂದ ಎಲ್ಲಾ ರಾಜಕಾರಣಿಗಳು ನೋಡಿ ಕಲಿಯಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯಾವ ಸಮಾಜಕ್ಕೂ ಅನುದಾನ ಕೊಡಬೇಡಿ ಅಂತ ನಾನು ಹೇಳಲ್ಲ. ಆದ್ರೆ ಬಸವಣ್ಣ, ಅಂಬೇಡ್ಕರ್ ಅವರ ಸಂಕಲ್ಪದಂತೆ ಸಮಾನತೆ ಇಲ್ಲಿ ಅನ್ವಯ ಆಗಿಲ್ಲ. ಕಾಂಗ್ರೆಸ್ ಹೈಕಮಾಂಡ್, ಸಿಎಂ ಡಿಕೆ ಶಿವಕುಮಾರ್ ಅವರು ಈ ಪಟ್ಟಿಯನ್ನ ಪರಿಶೀಲಿಸಬೇಕು. ಈಡಿಗ ಸಮಾಜದಲ್ಲಿ 3% ಶ್ರೀಮಂತರಿದ್ದರೂ ಉಳಿದ 97% ಬಡವರೇ ಆಗಿದ್ದಾರೆ. ವಿದ್ಯಾವಂತರಿಲ್ಲ, ಆರ್ಥಿಕ ಭದ್ರತೆ ಇಲ್ಲ, ಸಾಮಾಜಿಕ ಶಕ್ತಿಯಿಲ್ಲ. ಆದ್ರೂ ಕನಿಷ್ಠ 5 ಲಕ್ಷ ಅನುದಾವನ್ನಾದ್ರೂ ಸಿದ್ದರಾಮಯ್ಯ ಅವರು ಯಾಕೆ ಕೊಟ್ಟಿಲ್ಲ ಅನ್ನೋದನ್ನ ಹೇಳಬೇಕು. ಡಿಕೆ ಶಿವಕುಮಾರ್ ಅವರು ಈ ಪಟ್ಟಿಯನ್ನ ಪರಿಶೀಲಿಸಬೇಕು. ಕೊಟ್ಟರೆ ಎಲ್ಲರಿಗೂ ಕೊಡಿ, ಇಲ್ಲದಿದ್ರೆ ಯಾರಿಗೂ ಕೊಡಬೇಡಿ ಎಂದು ಒತ್ತಾಯಿಸಿದ್ದಾರೆ.
