ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ದೇಹದ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ನನ್ನ ದೇಹಕ್ಕೆ ನಾನೇ ಹಿಂಸೆ ನೀಡಿದ್ದೆ ಎಂದು ಹೇಳಿದ್ದಾರೆ. ಅವರ ಸೋಷಿಯಲ್ ಮೀಡಿಯಾ (Social Media) ಖಾತೆಯಲ್ಲಿ ತಮ್ಮ ವೇಟ್‌ಲಾಸ್ ಜರ್ನಿಯ (Weight Loss Journey) ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡ ತಾಪ್ಸಿ, ಬಾಲ್ಯದಿಂದಲೇ ಫಿಟ್ ಆಗಿದ್ದರೂ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಉಳಿಯುತ್ತಿತ್ತು. ಇದನ್ನು ಕಡಿಮೆ ಮಾಡಲು ಹೆಚ್ಚು ವ್ಯಾಯಾಮ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: IPL ಗೆಲುವಿನ ಬೆನ್ನಲ್ಲೇ ವೃಂದಾವನಕ್ಕೆ ಭೇಟಿ ನೀಡಿದ ವಿರುಷ್ಕಾ

ಅತಿಯಾದ ವ್ಯಾಯಾಮದಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಸಂಗ್ರಹವಾಗಬಹುದು. ಇದರಿಂದ ಹೊಟ್ಟೆಯ ಕೆಳಭಾಗದಲ್ಲಿ ಉಬ್ಬರ ಅಥವಾ ಕೊಬ್ಬು ಇದ್ದಂತೆ ಕಾಣಿಸುವುದು ಸಾಮಾನ್ಯ. ಪ್ರತಿ ಮಹಿಳೆಯ ದೇಹ ವಿಭಿನ್ನವಾಗಿರುತ್ತದೆ. ಹಾರ್ಮೋನ್ ಬದಲಾವಣೆಗಳಿಂದ ದೇಹದ ರೂಪವೂ ಬದಲಾಗುತ್ತಿರುತ್ತದೆ. ಹೀಗಾಗಿ ಪ್ರತಿದಿನ ಒಂದೇ ರೀತಿ ಕಾಣಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಅವರ ಪೌಷ್ಟಿಕ ತಜ್ಞೆ ಮುನ್ಮುನ್ ಗಣೇರಿವಾಲ್ ನೀಡಿದ ಸಲಹೆಯನ್ನು ಉಲ್ಲೇಖಿಸಿದ ತಾಪ್ಸಿ, ಮಹಿಳೆಯರಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಕೊಬ್ಬು ಮತ್ತು ನೀರಿನ ಅಂಶ ಇರುವುದು ಸಹಜ. ಇದು ಸಂತಾನೋತ್ಪತ್ತಿ ಅಂಗಗಳ ರಕ್ಷಣೆಗೆ ಸಹಕಾರಿಯಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫಿಟ್ ಆಗಿ ಕಾಣುವ ಪೋಟೋಗಳಿಗೆ ಮಾರು ಹೋಗಿ, ನೀವು ಅದೇ ರೀತಿ ಕಾಣಬೇಕು ಎಂದು ನಿಮ್ಮನ್ನೇ ನೀವು ಹಿಂಸಿಸಿಕೊಳ್ಳಬೇಡಿ. ಮಹಿಳೆಯರಿಗೆ ಸ್ವಲ್ಪ ಹೊಟ್ಟೆ ಉಬ್ಬರ ಅಥವಾ ಕೊಬ್ಬು ಇರುವುದು ಆರೋಗ್ಯಕರ ಎಂದು ತಾಪ್ಸಿ ಸಂದೇಶ ನೀಡಿದ್ದಾರೆ.

ಇದೇ ವೇಳೆ, ತಮ್ಮ ರೂಪದ ಬಗ್ಗೆ ಬಾಲ್ಯದಲ್ಲಿ ಇದ್ದ ಅಸಮಾಧಾನವನ್ನು ತಾಪ್ಸಿ ನೆನಪಿಸಿಕೊಂಡಿದ್ದಾರೆ. ದೊಡ್ಡ ಮೂಗು ಮತ್ತು ಗುಂಗುರು ಕೂದಲಿನ ಕಾರಣದಿಂದ ತಾವು ಇತರ ನಟಿಯರಂತೆ ಕಾಣುವುದಿಲ್ಲ ಎಂದು ಭಾವಿಸಿದ್ದೆ. ಕೂದಲು ಸ್ಟ್ರೇಟ್ ಮಾಡಲು ಕೆಮಿಕಲ್ ಟ್ರೀಟ್‌ಮೆಂಟ್ ಮಾಡಿಸಿಕೊಂಡು ನನ್ನ ಕೂದಲನ್ನು ನಾನೇ ಹಾಳು ಮಾಡಿಕೊಂಡೆ. ವರ್ಷಗಳ ಬಳಿಕ ನಾನು ಹೇಗಿದ್ದೆನೋ ಹಾಗೆ ಒಪ್ಪಿಕೊಳ್ಳಲು ಕಲಿತೆ. ನಮ್ಮ ನೈಜ ರೂಪವನ್ನು ಪ್ರೀತಿಸುವುದೇ ನಿಜವಾದ ಸೌಂದರ್ಯ ಎಂದು ತಾಪ್ಸಿ ಹೇಳಿದ್ದಾರೆ.ಇದನ್ನೂ ಓದಿ: ಸುಶ್ಮಿತಾ ಎಲ್ಲದಕ್ಕೂ ಪಾವತಿಸುತ್ತಿದ್ದಳು, ನಾನು ಬಾಯ್‌ಫ್ರೆಂಡ್ ತರ ಇದ್ದೆ – ಗೋಲ್ಡ್ ಡಿಗ್ಗರ್ ಎಂದಿದ್ದ ನೆಟ್ಟಿಗರಿಗೆ ಲಲಿತ್ ಮೋದಿ ಉತ್ತರ
