ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ನ್ಯಾಯಾಂಗವು ನಿರ್ವಹಿಸಿದ ರೀತಿಯ ಬಗ್ಗೆ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್(Kapil Sibal) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್(Supreme Court) ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ. ಪದೇ ಪದೇ ಸುಪ್ರೀಂ ಕೋರ್ಟ್ ಮೊರೆ ಹೋಗಿ ಸುಸ್ತಾಗಿದ್ದೇನೆ. ಈ ವಿಚಾರದಲ್ಲಿ ನ್ಯಾಯಾಂಗದಿಂದ ಪರಿಹಾರ ದೊರೆಯುವ ಬಗ್ಗೆ ತಮಗೆ ಯಾವುದೇ ನಿರೀಕ್ಷೆ ಉಳಿದಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿದ್ದ ಪ್ರತಿಭಟನೆಯನ್ನು ದೆಹಲಿ ಆಡಳಿತ ಹತ್ತಿಕ್ಕಿದ ರೀತಿಯನ್ನು ಖಂಡಿಸಿದರು.
ನನಗೆ ಸುಪ್ರೀಂ ಕೋರ್ಟ್‌ಗೆ ಪದೇ ಪದೇ ಹೋಗಿ ಸಾಕಾಗಿದೆ. ಇದು ನನ್ನ ವೈಯಕ್ತಿಕ ಅನಿಸಿಕೆ. ಅಲ್ಲಿಗೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನನಗನಿಸುತ್ತದೆ. ಭಾರತದ ಸುಪ್ರೀಂ ಕೋರ್ಟ್ ಮೇಲೆ ನನಗೀಗ ಹೆಚ್ಚಿನ ನಿರೀಕ್ಷೆಯೇನೂ ಉಳಿದಿಲ್ಲ ಎಂದು ಹೇಳಿದರು.
ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಕೈಬಿಟ್ಟಿರುವುದು ಮತ್ತು ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸಿರುವ ಕುರಿತು ಹಲವು ಬಾರಿ ಸುಪ್ರೀಂ ಕೋರ್ಟ್ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಅವರು ವಾದಿಸಿದರು.
ಸಂವಿಧಾನವನ್ನು ರಕ್ಷಿಸಲು ಯಾರಾದರೂ ಇದ್ದರೆ ಅದು ಸುಪ್ರೀಂ ಕೋರ್ಟ್ ಮಾತ್ರ ಎಂದು ಹೇಳುತ್ತಲೇ, ನ್ಯಾಯಾಲಯದ ಮೊರೆ ಹೋದರೂ ನಿರೀಕ್ಷಿತ ಫಲಿತಾಂಶ ಸಿಗುತ್ತದೆಯೇ ಎಂಬ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಷರತ್ತು ವಿಧಿಸಿ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆ
ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ನಡೆಯಬೇಕಿದ್ದ ಪ್ರತಿಭಟನೆಗೆ ಮುನ್ನ ದೆಹಲಿಯಲ್ಲಿ ಜಾರಿಗೊಳಿಸಲಾದ ಬಿಗಿ ಭದ್ರತಾ ನಿರ್ಬಂಧಗಳನ್ನು ಸಿಬಲ್ ಪ್ರಶ್ನಿಸಿದರು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಹಲವು ದಿನಗಳ ಹಿಂದೆಯೇ ಘೋಷಿಸಲಾಗಿತ್ತು. ಹಾಗಿದ್ದ ಮೇಲೆ ಯಾರಿಗೆ ಭದ್ರತಾ ಬೆದರಿಕೆ ಇತ್ತು? ನನಗೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಅಪರಿಚಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ, ಅವರ ಕುಟುಂಬದವರಿಗೂ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು. ಇದೇ ವೇಳೆ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ಪ್ರಶ್ನಿಸಿದ ಸಿಬಲ್, ಈ ಕ್ರಮಗಳು ಸಮಾಜವನ್ನು ರಕ್ಷಿಸಲು ಅಲ್ಲ, ಬದಲಿಗೆ ಆಡಳಿತ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಕೈಗೊಂಡ ಕ್ರಮ ಎಂದು ಟೀಕಿಸಿದರು.

