ಬಳ್ಳಾರಿ: ಬರ್ತಡೇ ದಿನ ಪಾರ್ಟಿ ನೆಪದಲ್ಲಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ (Ballary) ನಡೆದಿದೆ.
ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಆಫ್ರೀನ್ ಬಾನು ಕೊಲೆಯಾದ ದುರ್ದೈವಿ. ಪತಿ ನೂರ್ ಅಹ್ಮದ್ ಕೊಲೆ ಮಾಡಿರುವ ಆರೋಪಿ. ಇಬ್ಬರು ಪ್ರೀತಿಸಿ, ಎರಡು ವರ್ಷಗಳ ಹಿಂದೆ ಮದ್ವೆಯಾಗಿದ್ದರು. ದಂಪತಿಗೆ ಎಂಟು ತಿಂಗಳ ಗಂಡು ಮಗು ಇದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್
ಇತ್ತೀಚಿಗೆ ಇಬ್ಬರ ಮಧ್ಯೆ ಗಲಾಟೆಯಾಗಿತ್ತು. ಇದೇ ಕಾರಣದಿಂದ ಪತ್ನಿ ಆಫ್ರೀನ್ ಬಾನು ತವರು ಮನೆ ಸೇರಿದ್ದಳು. ಬಳಿಕ ಮೇ 21ರಂದು ಪತ್ನಿಯ ಹುಟ್ಟುಹಬ್ಬದ ಹಿನ್ನೆಲೆ ಆಕೆಗೆ ಕರೆ ಮಾಡಿ, ಮನೆಗೆ ಬರ್ತಿನಿ ಅಲ್ಲೇ ಆಚರಣೆ ಮಾಡೋಣ ಎಂದು ಹೇಳಿದ್ದ. ಗಂಡ ಬರುವ ಖುಷಿಯಲ್ಲಿ ಆಫ್ರೀನ್ ಬಾನು ಒಳ್ಳೆಯ ಅಡುಗೆ ಮಾಡಿ, ಗಂಡನಿಗೆ ಊಟ ಮಾಡಿಸಿ, ಕೇಕ್ ಕಟ್ ಮಾಡಿದ್ದರು.
ಅದೇ ದಿನ ಸಂಜೆ ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿ ಹೊರಗೆ ಕರೆದುಕೊಂಡು ಹೋಗಿದ್ದ. ರಾತ್ರಿಯಾದ್ರೂ ಮನೆಗೆ ವಾಪಾಸ್ ಆಗದೇ ಇದ್ದಾಗ ಆಫ್ರೀನ್ ಬಾನು ಕುಟುಂಬಸ್ಥರು ಆತಂಕಗೊಂಡು, ಅಳಿಯ ನೂರ್ ಅಹ್ಮದ್‌ಗೆ ಕರೆ ಮಾಡಿದ್ದಾರೆ. ಆಗ ಆತ ನನಗೇನೂ ಗೊತ್ತಿಲ್ಲ, ಎಲ್ಲರೂ ಸೇರಿ ಹುಡುಕೋಣ ಎಂದು ನಾಟಕ ಆಡಿದ್ದ. ಆದರೆ ಅಷ್ಟರಲ್ಲಾಗಲೇ ಆಫ್ರೀನ್ ಬಾನುಳನ್ನ ಕೊಲೆ ಮಾಡಿ, ಕುಡತಿನಿ ಸಮೀಪದ ನಿರ್ಜನ ಪ್ರದೇಶನವೊಂದರಲ್ಲಿ ಶವ ಬಿಸಾಡಿ ಬಂದಿದ್ದ.
ಶವ ಬಿಸಾಕಿದ ಸ್ಥಳದಿಂದ 10 ಕಿ.ಮೀಟರ್ ದೂರದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಆ ಬಳಿಕ ತನ್ನದೇ ಬೈಕ್‌ನಲ್ಲಿ ಶವ ತಂದು ಬಿಸಾಕಿದ್ದ. ಕೊನೆಗೆ ಏನೂ ಆಗಿಲ್ಲ ಎನ್ನುವಂತೆ ಮನೆಗೆ ಬಂದು ಆಫ್ರೀನ್ ಹುಡುಕಾಡುವ ನಾಟಕ ಮಾಡಿದ್ದ. ಬಳಿಕ ಆಫ್ರೀನ್ ಕುಟುಂಬಸ್ಥರು ನೂರ್ ಅಹ್ಮದ್ ಮೇಲೆ ಅನುಮಾನಗೊಂಡು ದೂರು ಕೊಟ್ಟಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಅಹ್ಮದ್ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ. ಕೊಲೆ ನಡೆದ 13 ದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣ ಕೊಳೆತು ಹೋಗಿದೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನೂರ್ ಅಹ್ಮದ್‌ನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.ಇದನ್ನೂ ಓದಿ: ಮತ್ತಷ್ಟು ಯಶಸ್ಸು ನಿಮ್ಮದಾಗಲಿ – ಡಿಕೆಶಿಗೆ ಸೋನಿಯಾ ಗಾಂಧಿ ಶುಭ ಹಾರೈಕೆ
