ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ದೊಡ್ಡ ಶಾಕ್ ನೀಡಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಸಾಕ್ಷಿ ವಿಚಾರಣೆಯ ವಿಳಂಬ ಹಾಗೂ ತಮ್ಮ ಸಿನಿಮಾ ವೃತ್ತಿಜೀವನದ ಸಂಕಷ್ಟಗಳನ್ನು ದರ್ಶನ್ ಉಲ್ಲೇಖಿಸಿದ್ದರೂ, ಕೋರ್ಟ್ ಮನವಿಯನ್ನು ಪರಿಗಣಿಸಿಲ್ಲ. ಮುಂದಿನ 1 ವರ್ಷ ಜಾಮೀನು ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ, ಅವರ ಹೊಸ ಸಿನಿಮಾಗಳು 2028ರ ವರೆಗೆ ಬಿಡುಗಡೆಯಾಗುವುದು ಆಲ್ಮೋಸ್ಟ್ ಡೌಟೇ.!
ಈ ಮಧ್ಯೆ ಜೈಲಿನಲ್ಲಿರುವ ಆರೋಪಿ ನಟನ ಲೈಫ್ ಸ್ಟೈಲ್ ಹೇಗಿದೆ? ಅನ್ನೋದ್ರ ಬಗ್ಗೆ ಒಂದಿಷ್ಟು ಅಪ್‌ಡೇಟ್ಸ್‌ಗಳು ಬಂದಿವೆ. ಪ್ರತಿದಿನದ ಊಟದ ಮೆನು, ಸೆಲ್ ಒಳಗೆ- ಹೊರಗೆ ಏನೆಲ್ಲಾ ಸೌಲಭ್ಯ ಮತ್ತು ಭದ್ರತೆ ನೀಡಲಾಗಿದೆ? ನಟ ದರ್ಶನ್ ಇಲ್ಲಿವರೆಗೂ ಯಾರನ್ನ ಎಷ್ಟು ಬಾರಿ ಭೇಟಿ ಮಾಡಿದ್ದಾರೆ? ಅನ್ನೋ ಎಕ್ಸಕ್ಲೂಸಿವ್ ಡಿಟೇಲ್ಸ್ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.

73 ಬಾರಿ ಫೋನ್ ಕಾಲ್
ನಟ ದರ್ಶನ್ ಜೈಲು ಸೇರಿದ ಬಳಿಕ ಆಗಸ್ಟ್ 2025 ರಿಂದ ರಿಂದ 2026 ಮೇ ವರೆಗೆ ಮೇ ವರೆಗೆ ಸುಮಾರು 70 ಬಾರಿ ಕುಟುಂಬಸ್ಥರು, 28 ಬಾರಿ ವಕೀಲರನ್ನ ಭೇಟಿ ಮಾಡಿದ್ದಾರೆ. ಇದರೊಂದಿಗೆ ಜೈಲಿನಿಂದ 73 ಬಾರಿ ಫೋನ್ ಕಾಲ್ ಮಾಡಿದ್ದಾರೆ.
ದರ್ಶನ್ ಬ್ಯಾರಕ್‌ನಲ್ಲಿ ಕಾರ್ಪೆಟ್, ಕಂಬಳಿ, ಬೆಡ್ ಶೀಟ್, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್ ಸೌಲಭ್ಯ ಕೊಡಲಾಗಿದೆ. ಕೋರ್ಟ್ ಆದೇಶದಂತೆ ಚಾದರ್/ಕಂಬಳಿ ವ್ಯವಸ್ಥೆ ಮಾಡಲಾಗಿದೆ. ದರ್ಶನ್ ಇರುವ ಬ್ಯಾರಕ್ ನಲ್ಲಿ ೨೪/೭ ಭದ್ರತೆ ವಹಿಸಲಾಗಿದ್ದು, ಹಗಲು ವೇಳೆ ಒಬ್ಬ ಸಹಾಯಕ ಜೈಲರ್ ಹಾಗೂ ಒಬ್ಬ ವಾರ್ಡರ್, ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳನ್ನ ನಿಯೋಜನೆ ಮಾಡಲಾಗಿದೆ.

ಇತರ ಖೈದಿಗಳು ಕಾರಿಡಾರ್ ಗೆ ಬರದಂತೆ ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಬ್ಯಾರಕ್ ಮುಂಬಾಗದ ಕಾರಿಡಾರ್ ನಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕಮಾಂಡ್ ಸೆಂಟರ್ ನಲ್ಲಿ ಸಿಸಿಟಿವಿಗಳ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ. ಈ ಮೂಲಕ ದರ್ಶನ್ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.
ದರ್ಶನ್ ಇರುವ ಬ್ಯಾರಕ್‌ನಲ್ಲಿ ಗಾಳಿ ಬೆಳಕು ಚೆನ್ನಾಗಿದ್ದು, ಜೈಲು ನಿಯಮದಂತೆ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸೊಳ್ಳೆ ಪರದೆ, ವಿಶಾಲವಾದ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್, ಭಾರತೀಯ ಮತ್ತು ವೆಸ್ಟರ್ನ್ ಶೌಚಾಲಯ ಟೆಲಿಫೋನ್ ಸೌಲಭ್ಯ ಕಲ್ಪಿಸಿದ್ದು, ಫಿಸಿಯೋಥೆರಪಿಸ್ಟ್ ಸಲಹೆ ಮೇರೆಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸಂದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ.

ಜೈಲಿನ ವೈದ್ಯರ ಸಲಹೆಯಂತೆ ಮೊಟ್ಟೆ, ಬ್ರೆಡ್ ಮತ್ತು ಹಾಲಿನಂತಹ ಹೆಚ್ಚುವರಿ ಆಹಾರ ವ್ಯವಸ್ಥೆ ನೀಡಲಾಗಿದೆ. ಸಂದರ್ಶನ ಸಮಯದಲ್ಲಿ ತರುವ ಹಣ್ಣುಗಳು, ಡ್ರೈ ಫ್ರೂಟ್ಸ್, ಬೇಕರಿ ಮತ್ತು ಸಿಹಿತಿಂಡಿ ಪದಾರ್ಥಗಳು, ಕೋರ್ಟ್ ಸೂಚನೆ ಮೇರೆಗೆ ಟಿವಿ, ಕೇರಂ, ದಿನಪತ್ರಿಕೆ, ಮಾಸಿಕ ಪತ್ರಿಕೆಗಳು ಮತ್ತು ಪುಸ್ತಕಗಳು, ಸ್ನಾನದ ಸೋಪು, ಬಟ್ಟೆ ತೊಳೆಯುವ ಸೋಪು, ತೆಂಗಿನ ಎಣ್ಣೆ, ಟೂತ್ ಪೇಸ್ಟ್, ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್, ಸೂರ್ಯನ ಬೆಳಕಿನಲ್ಲಿ ವಾಕಿಂಗ್ ಗೆ ಅವಕಾಶ. ಬೆಳಗ್ಗೆ 7.30 ರಿಂದ 8.30 ರ ವರೆಗೆ ಯೋಗಾಭ್ಯಾಸ, ಕಾರಿಡಾರ್‌ನಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 3 ಗಂಟೆಯಿಂದ 6 ರವರೆಗೆ ವಾಕಿಂಗ್‌ಗೆ ಅನುಮತಿ ನೀಡಲಾಗಿದೆ ಅಂತ ಸುಪ್ರೀಂ ಕೋರ್ಟ್ ಗೆ ಕೊಟ್ಟ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಸಿನಿ ಭವಿಷ್ಯಕ್ಕೆ ಮಾರಕ
ಜಾಮೀನು ಅರ್ಜಿಯಲ್ಲಿ ದರ್ಶನ್ ತಮ್ಮ ಸಿನಿಮಾ ಬದುಕಿನ ಸಂಕಷ್ಟಗಳನ್ನು ವಿವರಿಸಿದ್ದರು. “ನಾನು ಪ್ರತಿವರ್ಷ ಸರಾಸರಿ 2 ರಿಂದ 3 ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮೀಡಿಯಾ ಹೌಸ್ ಸ್ಟೂಡಿಯೋಸ್‌ನಂತಹ ದೊಡ್ಡ ಬ್ಯಾನರ್‌ಗಳ ಚಿತ್ರಗಳಿಗೆ ಸಹಿ ಮಾಡಿದ್ದೇನೆ. ನಿರ್ಮಾಪಕರು ಸುಮಾರು 6 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸುದೀರ್ಘ ಜೈಲುವಾಸದಿಂದ ನನ್ನ ಸಿನಿ ಭವಿಷ್ಯಕ್ಕೆ ಮರಣಘಂಟೆಯಾಗಲಿದೆ” ಎಂದು ತಮ್ಮ ಮನವಿಯಲ್ಲಿ ದರ್ಶನ್ ಉಲ್ಲೇಖಿಸಿದ್ದರು. ಆದರೆ ಈ ವಾದಕ್ಕೂ ಕೋರ್ಟ್ ಮನ್ನಣೆ ನೀಡಲಿಲ್ಲ.
ಒಟ್ಟು 272 ಸಾಕ್ಷಿ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದು, ಕಳೆದ 8 ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ನಿಧಾನಗತಿಯಲ್ಲಿ ವಿಚಾರಣೆ ಮುಂದುವರೆದರೆ ಪ್ರಕರಣ ಬೇಗ ಮುಕ್ತಾಯಗೊಳ್ಳುವ ಸಾಧ್ಯತೆ ಕಡಿಮೆ. ಇದೇ ಅಂಶವನ್ನು ದರ್ಶನ್ ಪರ ವಕೀಲರು ಜಾಮೀನುಗಾಗಿ ಪ್ರಮುಖ ಕಾರಣವಾಗಿ ಮುಂದಿಟ್ಟಿದ್ದರು. ಆದರೆ ಸುಪ್ರೀಂ ಕೋರ್ಟ್, “ಒಂದು ವರ್ಷದೊಳಗೆ ಕನಿಷ್ಠ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು. ಬಳಿಕ ವಿಚಾರಣಾ ನ್ಯಾಯಾಲಯದಲ್ಲಿಯೇ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು” ಎಂದು ಸೂಚನೆ ನೀಡಿದೆ. ಕೋರ್ಟ್‌ನ ಈ ಆದೇಶ ದರ್ಶನ್‌ಗೆ ಮಾತ್ರವಲ್ಲ, ಅವರ ಮೇಲೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ನಿರ್ಮಾಪಕರಿಗೂ ಮತ್ತು ಕೋಟ್ಯಂತರ ಅಭಿಮಾನಿಗಳಿಗೂ ದೊಡ್ಡ ಆಘಾತ ತಂದಿದೆ.

