ನವದೆಹಲಿ: ಎಸ್‌ಐಆರ್ ವಿರೋಧಿಸಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ಶನಿವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರಿಂದ ವಶಕ್ಕೆ ಪಡೆಯಲಾಗಿದ್ದ ವಕೀಲರನ್ನು ಬಿಡುಗಡೆ ಮಾಡುವಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (CJI Surya Kant) ಅವರ ಮೌಖಿಕ ಮಧ್ಯಪ್ರವೇಶ ಮಹತ್ವದ ಪಾತ್ರ ವಹಿಸಿದೆ.
ವಕೀಲರ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ತುರ್ತು ಮಧ್ಯಪ್ರವೇಶಕ್ಕೆ ಮನವಿ ಮಾಡಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಿಜೆಐ ವಶಕ್ಕೆ ಪಡೆದ ವಕೀಲರ ಬಿಡುಗಡೆ ಸೂಚನೆ ನೀಡಿದ್ದರು.
ಈ ಬಗ್ಗೆ ಮಾಧ್ಯಮಗಳೊಂದಿಗೂ ಮಾತನಾಡಿದ ಸಿಜೆಐ ಸೂರ್ಯಕಾಂತ್ ಅವರು, ನಾನೀಗ ಊರಲ್ಲಿ ಇಲ್ಲ. ಆದ್ರೆ ನಾನು ಮೌಖಿಕ ಆದೇಶ ಮಾಡಿದ ಬಳಿಕ ಅವರನ್ನ ಬಿಡುಗಡೆ ಮಾಡಿದ್ದಾರೆ ಅಂತ ಭಾವಿಸುತ್ತೇನೆ ಎಂದಿದ್ದಾರೆ.

ವಶಕ್ಕೆ ಪಡೆದ ವಕೀಲರ ಬಿಡುಗಡೆ
ಎಸ್‌ಸಿಬಿಎ, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ (SCAORA) ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯವನ್ನ ಸಿಜೆಐ ಗಮನಕ್ಕೆ ತಂದಿದ್ದರು. ಬಳಿಕ ಸಿಜೆಐ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅದರ ನಂತರ ವಶಕ್ಕೆ ಪಡೆಯಲಾಗಿದ್ದ ವಕೀಲರನ್ನ ಬಿಡುಗಡೆ ಮಾಡಲಾಗಿದೆ. ಎಸ್‌ಸಿಬಿಎ ಅಧ್ಯಕ್ಷ ಪ್ರದೀಪ್ ರೈ ಅವರು ಸಿಜೆಐ ಅವರ ಮಧ್ಯಪ್ರವೇಶಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಎಲ್ಲಾ ವಕೀಲರನ್ನು ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಸಂಘಟನೆಗೆ ಲಭಿಸಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ಉಪ ಆಯುಕ್ತ ಸಚಿನ್ ಶರ್ಮಾ ಅವರೊಂದಿಗೂ ಮಾತನಾಡಿರುವುದಾಗಿ ಪ್ರದೀಪ್ ರೈ ಹೇಳಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಯಾವುದೇ ವಕೀಲರನ್ನ ವಶಕ್ಕೆ ಪಡೆದಿಲ್ಲ ಎಂದು ಸಚಿನ್ ಶರ್ಮಾ ತಿಳಿಸಿದ್ದಾರಂತೆ. ಒಂದು ವೇಳೆ ಯಾರಾದರೂ ಪೊಲೀಸ್ ವಶದಲ್ಲಿರುವುದು ಕಂಡುಬಂದರೆ, ಅವರ ವಿವರಗಳನ್ನ ನೀಡಿದ ತಕ್ಷಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ರೈ ತಿಳಿಸಿದ್ದಾರೆ.
ವಶಕ್ಕೆ ಪಡೆದ ವಕೀಲರ ಸುರಕ್ಷತೆ ಬಗ್ಗೆ ಎಸ್‌ಸಿಬಿಎ ಆತಂಕ
ಶನಿವಾರ ಸಿಜೆಐ ಅವರಿಗೆ ಬರೆದ ಪತ್ರದಲ್ಲಿ ಎಸ್‌ಸಿಬಿಎ ಗೌರವ ಕಾರ್ಯದರ್ಶಿ ಪ್ರಜ್ಞಾ ಬಾಗೇಲ್ ಅವರು, ವಶಕ್ಕೆ ಪಡೆಯಲಾದ ವಕೀಲರು ಎಲ್ಲಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆಯೇ ಎಂಬುದನ್ನು ತುರ್ತಾಗಿ ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ಕಾನೂನು ನೆರವು ಪಡೆಯಲು ತಕ್ಷಣ ಅವಕಾಶ ಕಲ್ಪಿಸಬೇಕು ಹಾಗೂ ಕಾನೂನುಬದ್ಧ ಕಾರಣಗಳಿಲ್ಲದೆ ವಶಕ್ಕೆ ಪಡೆದಿರುವವರನ್ನು ಬಿಡುಗಡೆ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿತ್ತು. ಅಲ್ಲದೆ, ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪದ ಕುರಿತು ಪರಿಶೀಲನೆ ನಡೆಸಿ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿತ್ತು.
ಸುಪ್ರೀಂ ಕೋರ್ಟ್ ಆವರಣದಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಕೀಲರನ್ನ ವಶಕ್ಕೆ ಪಡೆದಿರುವ ವರದಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಎಸ್‌ಸಿಬಿಎ ನಿರ್ಣಯವನ್ನೂ ಅಂಗೀಕರಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತುರ್ತಾಗಿ ಮಾತುಕತೆ ನಡೆಸಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಕೋರುವ ನಿರ್ಣಯವನ್ನ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಂಗೀಕರಿಸಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿತ್ತು.

