ಬೆಲ್‌ಫಾಸ್ಟ್: ಇಡೀ ಭಾರತಕ್ಕೆ ಇಂದು ಡಬಲ್ ಶಾಕ್ ಆಗಿದೆ. ಅತ್ತ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಸೋತು, ಟಿ20 ವಿಶ್ವಕಪ್ ಟೂರ್ನಿಯಿಂದ ಭಾರತ ಹೊರಬಿದ್ದಿದೆ. ಇತ್ತ ಶ್ರೇಯಸ್ ಅಯ್ಯರ್ ನಾಯಕತ್ವದ ಪುರುಷರ ಟಿ20 ತಂಡ ಐರ್ಲೆಂಡ್ ವಿರುದ್ಧ ಸೋತು ಭಾರೀ ಮುಖಭಂಗ ಅನುಭವಿಸಿದೆ.
ಬೆಲ್‌ಫಾಸ್ಟ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್ ಬೌಲಿಂಗ್ ಪ್ರದರ್ಶನ ನೀಡಿದ ಐರ್ಲೆಂಡ್ ಫಸ್ಟ್ ಟೈಂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಸರಣಿ ಜಯ ಸಾಧಿಸಿದೆ. ಇದರೊಂದಿಗೆ 1,050 ದಿನಗಳ ಬಳಿಕ ಫಸ್ಟ್ ಟೈಂ ಭಾರತ ಟಿ20 ಸರಣಿ ಸೋತಿದೆ.

ಮುಂಬರುವ ಟೂರ್ನಿಗಳನ್ನ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಟಿ20 ತಂಡದಲ್ಲಿ ಭಾರೀ ಬದಲಾವಣೆ ಮಾಡಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಾಯಿತು. ಸೂರ್ಯಕುಮಾರ್ ಯಾದವ್‌ಗೆ ಕೊಕ್ ಕೊಟ್ಟು, ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಿ ವೈಭವ್ ಸೂರ್ಯವಂಶಿಗೆ ಸ್ಥಾನ ಸೇರಿದಂತೆ ಅನೇಕ ಬದಲಾವಣೆಯೊಂದಿಗೆ ಭಾರತ ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆದ್ರೆ ಭಾರತ ತಂಡಕ್ಕೆ ಓವರ್ ಕಾನ್ಫಿಡೆನ್ಸ್ ಜಾಸ್ತಿಯಾಯಿತಾ ಅನ್ನೋ ದನುಮಾನ ದಟ್ಟವಾಗಿ ಕಾಡ್ತಿದೆ.
ಟಿ20 ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ದ ಟಿ20 ಚಾಂಪಿಯನ್ ಭಾರತ ಮಂಡಿಯೂರಿದೆ. 2ನೇ ಪಂದ್ಯದಲ್ಲಿ ಕೇವಲ 155 ರನ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗದೇ ಸೋಲೊಪ್ಪಿಕೊಂಡಿದೆ. ಈ ಮೂಲಕ ಸತತ 2 ಪಂದ್ಯದಲ್ಲಿ ಸೋತು 0-2 ಅಂತರದಿಂದ ಸರಣಿ ಕೈಚೆಲ್ಲಿದೆ. ಇದೇ ಮೊದಲ ಬಾರಿಗೆ ಭಾರತವನ್ನು 2 ಪಂದ್ಯದಳಲ್ಲಿ ಮಣಿಸಿ ಸರಣಿ ಗೆದ್ದ ಸಾಧನೆ ಮಾಡಿದೆ.

ಟಾಸ್ ಸೋತ ಐರ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತ್ತು. 155 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ, 1 ರನ್ ಅಂತರದಿಂದ ವಿರೋಚಿತ ಸೋಲು ಕಂಡಿತು.
ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಭಾರತ
ಮೊದಲ ಪಂದ್ಯದ ಸೋಲಿನ ಬಳಿಕ ತೀವ್ರ ಟೀಕೆ ಎದುರಿಸಿದ್ದ ಭಾರತ ಬೌನ್ಸ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿತ್ತು. ಇತ್ತ ವೈಭವ್ ಸೂರ್ಯವಂಶಿ ಕಣಕ್ಕಿಳಿಯುತ್ತಾರೆ. ಭಾರತದ ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ ಅನ್ನೋ ಲೆಕ್ಕಾಚಾರ ಕೂಡ ತಲೆಕೆಳಗಾಯಿತು. ವೈಭವ್ ಸೂರ್ಯವಂಶಿಗೆ ಸ್ಥಾನ ಸಿಗಲಿಲ್ಲ. ಇತ್ತ ಭಾರತ ಬ್ಯಾಟಿಂಗ್ ಸರಿಯಾಗಲಿಲ್ಲ. ಸಂಜು ಸ್ಯಾಮ್ಸನ್, ಅಭಿಶೇಕ್ ಶರ್ಮಾ ಶೂನ್ಯ ಸುತ್ತಿದ್ರೆ, ಅನಗತ್ಯ ರನ್ ಕದಿಯಲು ಹೋಗಿ ಇಶಾನ್ ಕಿಶನ್ 12 ರನ್‌ಗಳಿಗೆ ಔಟಾದರು. ನಾಯಕ ಶ್ರೇಯಸ್ ಅಯ್ಯರ್ (10 ರನ್) ದೊಡ್ಡ ಹೊಡೆತಕ್ಕೆ ಯತ್ನಿಸಿ ಮುಗ್ಗರಿಸಿದರು. ಅಕ್ಷರ್ ಪಟೇಲ್ (14 ರನ್), ಶಿವಂ ದುಬೆ (20 ರನ್) ಕೂಡ ಕೈಕೊಟ್ಟರು.

ತಿಲಕ್ ವರ್ಮಾ, ಹರ್ಷಿತ್ ರಾಣಾ ಹೋರಾಟ
ಇತ್ತ ಭಾರತ 100 ರನ್‌ಗಳ ಗಡಿ ದಾಟಲು ತಿಣುಕಾಡುತ್ತಿದ್ದಾಗ, ತಿಲಕ್ ಆಸರೆಯಾದರು. 46 ಎಸೆತದಲ್ಲಿ ತಿಲಕ್ 55 ರನ್ ಸಿಡಿಸಿದರು. ಕೊನೆಯಲ್ಲಿ ಬಂದ ಹರ್ಷಿತ್ ರಾಣಾ 10 ಎಸೆತದಲ್ಲಿ ಸ್ಫೋಟಕ 21 ರನ್ ಸಿಡಿಸಿ ತಂಡವನ್ನು ಇನ್ನೇನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದ್ರೆ, 19.5ನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿ ಬೌಂಡರಿ ಲೈನ್ ಬಳಿ ಕ್ಯಾಚ್‌ಗೆ ಔಟಾದರು. ಹೀಗಾಗಿ ಭಾರತ 1 ರನ್ ವಿರೋಚಿತ ಸೋಲು ಕಂಡಿತು.
ಹ್ಯಾರಿ ಟೆಕ್ಟರ್ ಜವಾಬ್ದಾರಿಯುತ ಫಿಫ್ಟಿ
ಮೊದಲು ಬ್ಯಾಟ್ ಮಾಡಿದ ಆತಿಥೇಯರು 21 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು. ಆದರೆ ಹ್ಯಾರಿ ಟೆಕ್ಟರ್ ಅವರ ಸಮಯೋಚಿತ ಅರ್ಧಶತಕದ ನೆರವಿನಿಂದ ತಂಡ ಕುಸಿತದಿಂದ ಪಾರಾಯಿತು. 47 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 53 ರನ್ ಗಳಿಸಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಬೆನ್ ಕಾಲಿಟ್ಝ್ 23 ಎಸೆತಗಳಲ್ಲಿ 37 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರು. ಇದರಿಂದಾಗಿ ತಂಡ 150ರ ಗಡಿ ದಾಟುವಂತಾಯಿತು. ಭಾರತ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಪ್ರಿನ್ಸ್ ಯಾದವ್ ಅವರು 3 ವಿಕೆಟ್ ಕಬಳಿಸಿದರು. ಇನ್ನು ಅರ್ಶದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಗಳಿಸಿದರು.
