ಬೆಳಗಾವಿ: ಅನ್ನದಾತರ ಜೈಲ್ ಭರೋ(Jail bharo) ಚಳವಳಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಪ್ರತಿಭಟನಾ ರ್ಯಾಲಿ ಮತ್ತು ರಸ್ತೆ ತಡೆಗೆ ಮುಂದಾದ ರೈತರನ್ನು (Farmers) ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿದ್ದು, ಸ್ಥಳದಲ್ಲಿ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದೇ ವೇಳೆ ಪೊಲೀಸರ ವಾಹನದಲ್ಲಿದ್ದಾಗಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಅಸ್ವಸ್ಥಗೊಂಡಿದ್ದು, ಪೊಲೀಸರ ಅಮಾನವೀಯ ವರ್ತನೆಗೆ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ(Belagavi) ಹೊರವಲಯದ ಮುಕ್ತಿ ಮಠದಲ್ಲಿ ಒಟ್ಟುಗೂಡಿದ ರೈತರು ಮುಖಂಡ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಹಾಗೂ ಪ್ರತಿಭಟನಾ ರ್ಯಾಲಿಗೆ ಸಜ್ಜಾಗಿದ್ದರು. ಈ ವೇಳೆ ಪ್ರತಿಭಟನೆಯನ್ನು ತಡೆಯಲು ಮುಂದಾದ ಪೊಲೀಸರು, ರೈತರನ್ನು ಬಲವಂತವಾಗಿ ವಶಕ್ಕೆ ಪಡೆಯಲು ಆರಂಭಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ ಹಾಗೂ ರೈತರು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಪೊಲೀಸರ ದಿಢೀರ್ ಕ್ರಮದಿಂದಾಗಿ ಮುಕ್ತಿ ಮಠದ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತು.
ಮತ್ತೊಂದೆಡೆ, ಗುರ್ಲಾಪುರದಿಂದ ಬೆಳಗಾವಿಯತ್ತ ತೆರಳುತ್ತಿದ್ದ ಪ್ರಮುಖ ರೈತ ನಾಯಕ ಶಶಿಕಾಂತ ಗುರೂಜಿ ಅವರನ್ನು ಗೋಕಾಕ್ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಮೂಡಲಗಿ ತಾಲೂಕಿನಲ್ಲಿ ತಡೆದು ವಶಕ್ಕೆ ಪಡೆದುಕೊಂಡಿತು.
ಪೊಲೀಸರ ವಶದಲ್ಲಿದ್ದಾಗಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಶಶಿಕಾಂತ ಗುರೂಜಿ, “ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನನ್ನನ್ನು ಹಾಗೂ ಚೂನಪ್ಪ ಪೂಜಾರಿ ಸೇರಿದಂತೆ ಎಲ್ಲಾ ಜಿಲ್ಲೆಗಳ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ. ಆದ್ದರಿಂದ ಯಾವುದೇ ರೈತರು ಸದ್ಯಕ್ಕೆ ಬೆಳಗಾವಿಯತ್ತ ಧಾವಿಸಬೇಡಿ, ಮನೆಯಲ್ಲೇ ಇರಿ. ನಾವೆಲ್ಲರೂ ಸಂಜೆ ಮತ್ತೆ ಒಟ್ಟಾಗಿ ಸೇರೋಣ” ಎಂದು ಮನವಿ ಮಾಡಿದರು.
ಮುಕ್ತಿ ಮಠದಿಂದ ರೈತರನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನದಲ್ಲಿ ಗೋಕಾಕ್ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ಗಂಭೀರ ಘಟನೆಯೊಂದು ನಡೆದಿದೆ. ವಾಹನದಲ್ಲಿದ್ದ, ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೈತರೊಬ್ಬರು ಏಕಾಏಕಿ ತೀವ್ರ ಅಸ್ವಸ್ಥಗೊಂಡರು.
ಕೊನೆಗೆ ಬಸಾಪುರ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಅಸ್ವಸ್ಥ ರೈತನನ್ನು ಕೆಳಗಿಳಿಸಿ ಪೊಲೀಸರು ವಾಹನ ಸಮೇತ ತೆರಳಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ. ನಂತರ ಜೊತೆಯಲ್ಲಿದ್ದ ಅನ್ನದಾತರೇ ಆ ಅಸ್ವಸ್ಥ ರೈತನನ್ನು ಹೊತ್ತುಕೊಂಡು ಬಂದು ಬಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅನ್ನದಾತರ ಹಕ್ಕೊತ್ತಾಯದ ಹೋರಾಟವನ್ನು ದಮನಿಸಲು ಪೊಲೀಸರು ಇಷ್ಟೊಂದು ಕಠೋರವಾಗಿ ವರ್ತಿಸುತ್ತಿದ್ದಾರೆ ಎಂದು ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
