ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರು (Farmers), ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳ ಸುದೀರ್ಘ ವರ್ಷಗಳ ಹೋರಾಟ ಮತ್ತು ಕನಸಾಗಿದ್ದ ಹೇಮಾವತಿ ನೀರು (Hemavati Water) ಕೊನೆಗೂ ನವಿಲೆ ಭಾಗದ ಕೆರೆಗಳಿಗೆ ಹರಿಯಲು ಆರಂಭಿಸಿದೆ.
ಗ್ಯಾರೇಹಳ್ಳಿ ಬಳಿ ದಬ್ಬೆಘಟ್ಟ ಭಾಗದ ಕೆನಾಲ್‌ಗೆ ಶಾಸಕ ಸಿ.ಬಿ ಸುರೇಶ್‌ಬಾಬು (Suresh Babu) ಹಾಗೂ ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಅವರು ರೈತರೊಂದಿಗೆ ಗಂಗಾಪೂಜೆ ನೆರವೇರಿಸುವ ಮೂಲಕ ನೀರು ಹರಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಬಿ ಸುರೇಶ್‌ಬಾಬು, 2011ರಲ್ಲಿ ಮಂಜೂರಾತಿ ಪಡೆದ ಹೇಮಾವತಿ ನಾಲಾ ಕಾಮಗಾರಿ ಅನೇಕ ಅಡೆತಡೆಗಳನ್ನು ಎದುರಿಸಿ, ಇಂದು ರೈತರ ಸಹಕಾರದಿಂದ ಪ್ರಥಮ ಬಾರಿಗೆ ದಬ್ಬೇಘಟ್ಟದ ಕಡೆಗೆ ಹರಿಯುತ್ತಿದೆ. ಈ ನೀರು ಚುಂಗನಹಳ್ಳಿ, ಕೊಡಲಾಗರ, ದಬ್ಬೆಘಟ್ಟ, ಮೇಲನಹಳ್ಳಿ, ಮಾರಸಂದ್ರ ಹಾಗೂ ನವಿಲೇ ಕೆರೆ ಆಣೆಕಟ್ಟೆ ಭಾಗಗಳಿಗೆ ತಲುಪಲಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಯನ್ನ ಶೀಘ್ರ ಪೂರ್ಣಗೊಳಿಸಿ ಚಿಕ್ಕನಾಯಕನಹಳ್ಳಿ, ನಾಗತಿಹಳ್ಳಿ, ಸಾದರಹಳ್ಳಿ ಹಾಗೂ ಕಂದಿಕೆರೆ ಭಾಗದ ಕೆರೆಗಳಿಗೂ ನೀರು ಹರಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಯಾವುದೇ ಒಂದು ಯೋಜನೆಗೆ ಚಾಲನೆ ನೀಡುವ ಮುನ್ನ ಭೂಸ್ವಾಧೀನ (ಲ್ಯಾಂಡ್ ಅಕ್ವಿಸಿಷನ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಿ ಕಾಮಗಾರಿ ಕೈಗೆತ್ತಿಕೊಂಡರೆ ಯೋಜನೆಗಳು ವಿಳಂಬವಾಗುವುದಿಲ್ಲ. ಕೆನಾಲ್‌ನಲ್ಲಿ ಪ್ರತಿವರ್ಷ ಹೂಳು ತುಂಬಿಕೊಳ್ಳುವ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಕಟ್ ಅಂಡ್ ಕವರ್ (Cut & Cover) ಕಾಮಗಾರಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದು, ಸಚಿವರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

