ದಾವಣಗೆರೆ: ಮಲೆನಾಡು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿ(Tungabhadra River) ಉಕ್ಕಿ ಹರಿಯುತ್ತಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ(Ukkadagatri Temple) ಮುಂಭಾಗಕ್ಕೆ ನದಿಯ ನೀರು ನುಗ್ಗಿದೆ.
ದಾವಣಗೆರೆ(Davangere) ಜಿಲ್ಲೆಯಲ್ಲಿ ಸದ್ಯ ಮಳೆಯಿಲ್ಲದಿದ್ದರೂ, ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ ತುಂಗಾ ಜಲಾಶಯದಿಂದ (Tunga Dam) ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿ ಸಂಪೂರ್ಣ ಮೈದುಂಬಿ ಹರಿಯುತ್ತಿದ್ದು, ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ.
ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ, ಭಕ್ತರು ಪವಿತ್ರ ಸ್ನಾನ ಮಾಡುವ ಉಕ್ಕಡಗಾತ್ರಿ ಕ್ಷೇತ್ರದ ಪ್ರಮುಖ ಸ್ನಾನಘಟ್ಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.
ಸ್ನಾನಘಟ್ಟದ ಪಕ್ಕದಲ್ಲೇ ಇದ್ದ ಹತ್ತಕ್ಕೂ ಹೆಚ್ಚು ಪೂಜಾ ಸಾಮಗ್ರಿ ಹಾಗೂ ಇತರ ವ್ಯಾಪಾರಸ್ಥರ ಅಂಗಡಿಗಳಿಗೆ ನದಿಯ ನೀರು ನುಗ್ಗಿದ್ದು, ಜಲಾವೃತಗೊಂಡಿವೆ. ಇದನ್ನೂ ಓದಿ: ಹಾಸನದಲ್ಲಿ ಮಳೆಯಬ್ಬರ – ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ ಇದನ್ನೂ ಓದಿ: ಹಾಸನದಲ್ಲಿ ಮಳೆಯಬ್ಬರ – ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ
ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚುತ್ತಿರುವುದರಿಂದ, ಯಾವುದೇ ಕಾರಣಕ್ಕೂ ಭಕ್ತಾದಿಗಳು ಹಾಗೂ ಸಾರ್ವಜನಿಕರು ನದಿ ಪಾತ್ರಕ್ಕೆ ಇಳಿಯಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ಥಳೀಯ ಪೊಲೀಸರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದ್ದಾರೆ. ಭಕ್ತರ ಸುರಕ್ಷತೆಗಾಗಿ ನದಿ ತೀರದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿದೆ.
