– ಅ.29 ರಿಂದ ನ.11 ರವರೆಗೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ
– ದುಂದುವೆಚ್ಚಕ್ಕೆ ಆಕ್ಷೇಪ – ಇದೊಳ್ಳೆ ಹುಚ್ಚರ ಸಂತೆ ಎಂದ ಸಚಿವರು
ಹಾಸನ: ಇದೇ ಅ.29 ರಿಂದ ನ.11 ರವರೆಗೆ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ (Hassanamba Jatra Mahotsav) ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು. ಇದೇ ವೇಳೆ ಹಾಸನಾಂಬೆಯ ಖರ್ಚು-ವೆಚ್ಚ ಕೇಳಿ ಸಚಿವ ಶಿವಲಿಂಗೇಗೌಡ ತಲೆ ಚಚ್ಚಿಕೊಂಡಿದ್ದಾರೆ.
ಇದೊಳ್ಳೆ ಹುಚ್ಚರ ಸಂತೆ
ಕಾಮಗಾರಿಗಳಿಗೆ ಮೀಸಲಿಟ್ಟಿರುವ ಹಣದ ಮೊತ್ತದ ಬಗ್ಗೆ ಮಾಹಿತಿ ಪಡೆಯುತ್ತಿದ್ದ ವೇಳೆ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಾಸನಾಂಬೆ ಜಾತ್ರಾ ಮಹೋತ್ಸವದ ಸಿದ್ಧತೆ ಹೆಸರಿನಲ್ಲಿ ಈ ರೀತಿಯ ದುಂದುವೆಚ್ಚ ಮಾಡಲು ನಾನು ಒಪ್ಪಲ್ಲ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲ್ಲ. ಆ ದೇವರಲ್ಲ, ಸತ್ತು ಹೋಗಿರುವ ನಮ್ಮ ಅಪ್ಪ ಬಂದರೂ ಕೇಳಲ್ಲ. ಬೇಡ ಅಂದರೆ ಹೇಳಿ, ಸಿಎಂ ಜೊತೆ ಮಾತನಾಡಿ ನಾನೇ ವಾಪಾಸ್ ಹೋಗುತ್ತೇನೆ. ಇದೊಳ್ಳೆ ಹುಚ್ಚರ ಸಂತೆ ಮಾಡಿದಂತಾಗುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಂಟ್ರೋಲ್ ರೂಂ ಸಿದ್ದತೆಗಾಗಿ 50 ಲಕ್ಷ ಆಗುತ್ತೆ ಅಂತ ಅಧಿಕಾರಿಗಳು ಹೇಳುತ್ತಿದ್ದಂತೆ, ಅಯ್ಯೋ ಇದೇನ್ರಿ…? ಅರ್ಧ ಕೋಟಿ ಆಗುತ್ತಾ…? ಬರಗಾಲ ಇದೆ. ಜನ ಏನು ಮಾತಾಡ್ತಾರೆ ಅಂತ ತಲೆ ಚಚ್ಚಿಕೊಂಡಿದ್ದಾರೆ. ಇದೆಲ್ಲಾ ನೋಡಿದ್ರೆ ಜನರು ಮಾತಾಡೋದೆ ಸರಿ ಅನ್ಸುತ್ತೆ ಅಂದಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿ.ಸಿ. ಲತಾಕುಮಾರಿ, ಬೇಡ ಅಂದ್ರೆ ಡಿಲೀಟ್ ಮಾಡ್ಸೋಣ ಹಾಗೆಲ್ಲಾ ಮಾತನಾಡಬೇಡಿ ಅಂದಿದ್ದಾರೆ. ಇಷ್ಟೊಂದು ದುಂದುವೆಚ್ಚಾ ಬೇಕಾ ಎನ್ನೋದು ನಂಗೆ ಇಷ್ಟ ಇಲ್ಲ. ಈ ಕರ್ಮದಲ್ಲಿ ನಾನು ಪಾಲುದಾರ ಆಗ್ಬೇಕಾ ಅಂತ ಶಿವಲಿಂಗೇಗೌಡ ಪ್ರಶ್ನೆ ಮಾಡಿದ್ದಾರೆ. ಇನ್ನೂ, ಗುತ್ತಿಗೆದಾರರ ಬಳಿ ಚೌಕಾಸಿಗಳಿದ ಶಿವಲಿಂಗೇಗೌಡ, ದೇವರ ಕೆಲಸ. ದಯಮಾಡಿ ಕಡಿಮೆ ಮಾಡ್ರಪ್ಪ ಅಂತ ಕೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಖರ್ಚಿಗೆ ಶಾಸಕ ಸ್ವರೂಪ್ ಆಕ್ಷೇಪ
ಇನ್ನೂ ಸಭೆಯಲ್ಲಿ ಸೋಷಿಯಲ್ ಮೀಡಿಯಾ ಪ್ರಚಾರದ ಬಗ್ಗೆಯೂ ಶಾಸಕ ಹೆಚ್.ಪಿ ಸ್ವರೂಪ್ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಸೋಷಿಯಲ್ ಮೀಡಿಯಾಗೆ ಪ್ರತಿನಿತ್ಯ 21 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೆಬ್ಸೈಟ್ಗೆ ಮೂರುವರೆ ಲಕ್ಷ ರೂಪಾಯಿ ಇದೆ ಎಂದ ಅಧಿಕಾರಿಗಳು ತಿಳಿಸಿದರು.
ಮತ್ತೆ ಸೋಷಿಯಲ್ ಮೀಡಿಯಾಗೆ ಹಣ ಯಾಕೆ? ಹಾಸನಾಂಬೆ ಬಗ್ಗೆ ಪ್ರಚಾರ ಮಾಡಿದ್ರೆ ಅವರಿಗೆ ಆದಾಯ ಬರುತ್ತೆ, ನಾವು ಯಾಕೆ ಹಣ ಕೊಡಬೇಕು ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದಲ್ಲದೆ, ರೀಲ್ಸ್ಗಾಗಿ ಪ್ರತ್ಯೇಕ ಪಿಆರ್ ಟೀಂ ಇರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಶಾಸಕ, ಇದೆಲ್ಲಾ ಯಾಕೆ ಬೇಕು? ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಅಧಿಕಾರಿಗಳು, ಪ್ರಚಾರ ಮಾಡದೇ ಹೋದರೆ ಜನರ ಬರಲ್ಲ. ಜನರು ಬರದೆ ಇದ್ದರೆ ಆದಾಯ ಬರಲ್ಲ ಸರ್ ಎಂದು ಹೇಳಿದರು. ಹಾಸನಾಂಬೆ ಉತ್ಸವದಲ್ಲಿ ಆದಾಯ ಬರಬೇಕೆಂದರೆ ಸೋಷಿಯಲ್ ಮೀಡಿಯಾ ಅಗತ್ಯ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

