ಹಾಸನ: ಜಿಲ್ಲೆಯ ಗ್ರಾ.ಪಂ. ಚುನಾವಣೆಗೆ ಅವೈಜ್ಞಾನಿಕ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಾರ್ಯವೈಖರಿ ವಿರುದ್ಧ ತೀವ್ರವಾಗಿ ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಅವರು ಕಿಡಿಕಾರಿದ ಬೆನ್ನಲ್ಲೇ ಇದೀಗ ಲತಾಕುಮಾರಿ (DC Lathakumari) ಅವರು ಪೋಸ್ಟ್ ಹಾಕಿದ್ದು, ಆರೋಪಕ್ಕೆ ಟಾಂಗ್ ನೀಡಿದ್ರಾ ಎಂಬ ಪ್ರಶ್ನೆ ವ್ಯಕ್ತವಾಗಿದೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಪೋಸ್ಟ್‌ನಲ್ಲಿ, ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಲಿಲ್ಲವೆಂದರೆ ನಿಮ್ಮನ್ನು ದ್ವೇಷಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಮಾಜಿ ಸಚಿವ ರೇವಣ್ಣ ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಇದನ್ನೂ ಓದಿ: 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ – ಕೆ.ಎಸ್ ಲತಾಕುಮಾರಿ ವಿರುದ್ಧ ಹೆಚ್.ಡಿ.ರೇವಣ್ಣ ಕೆಂಡಾಮಂಡಲ
— KS Latha Kumari, IAS (@KSLathaKumari1) August 23, 2026
ಆ21ರಂದು ಶಾಸಕರುಗಳಾದ ಎ.ಮಂಜು, ಹೆಚ್.ಪಿ.ಸ್ವರೂಪ್‌ಪ್ರಕಾಶ್ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದ ರೇವಣ್ಣ ಅವರು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಈ ಡಿಸಿನಾ? ನಮ್ಮ ಮತದಾರರು ಹೆಚ್ಚು ಇರುವ ಕಡೆ ಗ್ರಾ.ಪಂ.ಚುನಾವಣೆಗೆ ಮೀಸಲಾತಿ ಬದಲಾಯಿಸಿದ್ದಾರೆ. ತಹಶೀಲ್ದಾರ್ ಕಳುಹಿಸಿರುವುದನ್ನು ಬದಲಾಯಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸತತವಾಗಿ ಈ ರೀತಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವೆಲ್ಲಾ ನಡಿತಿರೋದು. ಈ ಜಿಲ್ಲಾಧಿಕಾರಿ ಡ್ರಾಮಾ ಮಾಸ್ಟರ್ ಇದ್ದಂಗೆ. ಎಲ್ಲೂ ಹೊರಗಡೆ ಹೋಗಲ್ಲ, ಬರೀ ಸಭೆ ಮಾಡುತ್ತಾರೆ ಎಂದು ಕಿಡಿಕಾರಿದ್ದರು.
ಯಾವ ಆಧಾರದ ಮೇಲೆ ಡಿಸಿ ಮೀಸಲಾತಿ ಬದಲಾಯಿಸಿದರು? ಕರಡು ಪ್ರತಿ ಹಾಕಬೇಕಿತ್ತು. ಕೇಂದ್ರದ ಎಲೆಕ್ಷನ್ ಕಮಿಷನರ್ ಅವರನ್ನು ಬಿಜೆಪಿ ಏಜೆಂಟ್ ಅಂತಾರೆ. ಬರುವ ಸೋಮವಾರ ಮಾಜಿ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಾರೆ. ಆ ನಂತರ ಒಂದು ವಾರ ಗಡುವು ಕೊಡುತ್ತೇವೆ. ಮೀಸಲಾತಿ ಪಟ್ಟಿ ಸರಿಪಡಿಸಬೇಕು. ಇಲ್ಲವಾದಲ್ಲಿ ನಾಲ್ಕು ಜನ ಜೆಡಿಎಸ್ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಏನಾದರೂ ಘಟನೆ ಆದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಗೋಲುರಹಿತ ಡ್ರಾ – ಸೆಮಿಫೈನಲ್ ರೇಸ್‌ನಿಂದ ಭಾರತ ಔಟ್

