ಬೆಂಗಳೂರು: ಒಂದು ಕಡೆ ವಾರಾಂತ್ಯದ ರಜೆ ಮತ್ತೊಂದು ಕಡೆ ಹಾಸನಾಂಬೆ ಜಾತ್ರಾ (Hasanamba Jatra) ಮಹೋತ್ಸ ಕೂಡ ಶುರುವಾಗಿರುವ ಹಿನ್ನೆಲೆ ಬೆಂಗಳೂರು ಮಂದಿ ಈಗ ಹಾಸನದತ್ತ ಹೊರಟಿದ್ದಾರೆ. ವಿಶೇಷವಾಗಿ ಶನಿವಾರ ಸಂಜೆ ಕೆಲಸ ಮುಗಿಸಿಕೊಂಡ ಜನರು ಹಾಸನಾಂಬೆಯ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಸಾಗರವೇ ತುಂಬಿ ತುಳುಕುತ್ತಿದೆ.
ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಿರುವ ಹಿನ್ನೆಲೆ ಹಾಸನಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ನವೆಂಬರ್ 1ರ ರಜಾದಿನದ ಹಿನ್ನೆಲೆ ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆಯಲು ಜನರು ಸಜ್ಜಾಗಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಸಂಜೆ 4 ಗಂಟೆಯಿಂದ ಹಾಸನಕ್ಕೆ 65ಕ್ಕೂ ಹೆಚ್ಚು ನಾನ್ಸ್ಟಾಪ್ ಬಸ್ಗಳನ್ನ ಕಾರ್ಯಾಚರಣೆಗೆ ಇಳಿಸಲಾಗಿದೆ. ಅಲ್ಲದೆ, ಬೇರೆ ಮಾರ್ಗಗಳಲ್ಲಿ ಸಂಚರಿಸುವ ಬಸ್ಗಳನ್ನೂ ಹಾಸನದ ಕಡೆಗೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ 150ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಇನ್ನು ಅಕ್ಟೋಬರ್ 29ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಅಂದೇ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 30ರಿಂದ ಸಾರ್ವಜನಿಕ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 11ರಂದು ಗರ್ಭಗುಡಿಯ ಬಾಗಿಲು ಮುಚ್ಚಲಿದೆ. ಸುಮಾರು 30 ರಿಂದ 35 ಲಕ್ಷ ಸಂಖ್ಯೆಯ ಭಕ್ತರು ಹಾಸನಾಂಬೆಯ ದರ್ಶನ ಪಡೆಯುವ ನಿರೀಕ್ಷೆಯಿದೆ.

