ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಇಂದು ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುತ್ತಿರುವುದಾಗಿ ಘೋಷಿಸಿದರು. ಜೊತೆಗೆ ಮೇಲ್ಮನೆಯಲ್ಲಿನ ಗಮನಾರ್ಹ ಸಂಖ್ಯೆಯ ಎಎಪಿ ಸದಸ್ಯರನ್ನು ಬಿಜೆಪಿಗೆ ಸೇರುತ್ತಿದ್ದಾರೆ. ಅವರಲ್ಲಿ ಆಪ್ ರಾಜ್ಯಸಭಾ ಸದಸ್ಯ, ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಸೇರಿದ್ದಾರೆ.
ಈ ಬೆಳವಣಿಗೆಯಿಂದ ಎಎಪಿ ಮತ್ತು ಅದರ ನಾಯಕ ಅರವಿಂದ್ ಕೇಜ್ರಿವಾಲ್‌ಗೆ ದೊಡ್ಡ ಹಿನ್ನಡೆಯಾಗಿದೆ. ರಾಘವ್ ಚಡ್ಡಾ, ಎಎಪಿಯ ಸುಮಾರು ಮೂರನೇ ಎರಡರಷ್ಟು ರಾಜ್ಯಸಭಾ ಸಂಸದರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಹೇಳಿದ್ದಾರೆ. ಚಡ್ಡಾ ಜೊತೆಗೆ, ಬಿಜೆಪಿಗೆ ಸೇರುತ್ತಿರುವ ಸಂಸದರಲ್ಲಿ ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಇದ್ದಾರೆ. ಎಎಪಿ ಪ್ರಸ್ತುತ 10 ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಹೆಚ್ಚಿನವರು ಪಂಜಾಬ್‌ನಿಂದ ಬಂದವರು.
ಹಿರಿಯ ಎಎಪಿ ಸಂಸದರಾದ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಚಡ್ಡಾ, ಪಕ್ಷಕ್ಕಾಗಿ 15 ವರ್ಷ ಬೆವರು, ರಕ್ತ ಹರಿಸಿ ದುಡಿದ್ದೇನೆ. ಆದರೆ, ಪಕ್ಷ ಹಿಂದೆ ಪ್ರತಿಪಾದಿಸಿದ್ದ ಪ್ರಾಮಾಣಿಕ ರಾಜಕೀಯದಿಂದ ದೂರ ಸರಿದಿದೆ ಎಂದು ಬೇಸರ ಹೊರಹಾಕಿದ್ದರು.
ಸುದ್ದಿಗೋಷ್ಠಿ ಬಳಿಕ ರಾಘವ್ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾದರು. ನಾಯಕರಿಗೆ ಹೂಗುಚ್ಛ ನೀಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಆತ್ಮೀಯ ಸ್ವಾಗತ ನೀಡಿದರು.



