ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಕರಿಕಲ್ಲು ಗುಡ್ಡದಲ್ಲಿ ಮೂವರು ರೈತರು ಮೃತಪಟ್ಟ ಶೂಟೌಟ್(Hanur Shootout) ಪ್ರಕರಣ ಇದೀಗ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ(Karnataka State Human Rights Commission) ಮೆಟ್ಟಿಲೇರಿದೆ.
ಹನೂರು ಅರಣ್ಯ ಅಧಿಕಾರಿಗಳ ಗುಂಡೇಟಿನಿಂದ ಆಗಸ್ಟ್ 15 ರಂದು 3 ಜನ ನಾಗರಿಕರು ಮೃತಪಟ್ಟ ಪ್ರಕರಣವನ್ನು ಮಾನ್ಯ ಆಯೋಗವು ಸ್ವಯಂ ಪ್ರಕರಣವಾಗಿ ದಾಖಲಿಸಿಕೊಂಡು ವಿಚಾರಣೆಗೆ ಆದೇಶಿಸಿದೆ.
ಪ್ರಕರಣದ ವಿಚಾರಣೆಗಾಗಿ ಸಾಕ್ಷಿದಾರರು ಹಾಗೂ ಆಡಿಯೋ/ವಿಡಿಯೋ ಸಾಕ್ಷ್ಯಾಧಾರಗಳೊಂದಿಗೆ ಹಾಜರಾಗುವಂತೆ ಮೃತ ಆಂಥೋಣಿ ಸ್ವಾಮಿ, ಸೆಬಾಸ್ಟಿಯನ್ ಡೇವಿಡ್ ಕುಮಾರ್,ಜಾನ್ ರೋಸ್ ಪೀಟರ್ ಅವರ ಕುಟುಂಬದವರಿಗೆ ಸೆಪ್ಟೆಂಬರ್ 3 ರಂದು ಹಾಜರಾಗುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರು ನೋಟಿಸ್ ನೀಡಿದ್ದರು. ಇದನ್ನೂ ಓದಿ: 2 ತಿಂಗಳ ಒಳಗಡೆ ಸಂತ್ರಸ್ತ ರೈತರಿಗೆ ಸೈಟ್ ಕೊಡಿ- ನೈಸ್‌ಗೆ ಸರ್ಕಾರ ಸೂಚನೆ
ನೋಟಿಸ್‌ನಂತೆ ಇಂದು ಮೂರು ಕುಟುಂಬಗಳ ಸದಸ್ಯರು ಬೆಂಗಳೂರಿನ(Bengaluru) ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಹಾಜರಾಗಿ, ಅಧಿಕಾರಿಗಳ ಮುಂದೆ ತಮ್ಮ ಹೇಳಿಕೆಯನ್ನು ನೀಡಿ ವಾಪಸ್ ಆಗಿದ್ದಾರೆ.
ಆಗಸ್ಟ್ 15 ರ ಶೂಟೌಟ್ ಪ್ರಕರಣವು ಈಗಾಗಲೇ ಸಿಐಡಿ ತನಿಖೆ ಹಂತದಲ್ಲಿದ್ದು, ಇದೀಗ ಮಾನವ ಹಕ್ಕುಗಳ ಆಯೋಗವೂ ತನಿಖೆಗೆ ಮುಂದಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
