ಹಾಸನ: ಅವರು ಐಎಎಸ್ ಮಾಡಿದ್ರೆ ನನ್ನನ್ನು ಜನ ಆರು ಬಾರಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದ್ದಾರೆ ಎಂದು ಹಾಸನ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅವರು ಜಿಲ್ಲಾಧಿಕಾರಿ ಲತಾಕುಮಾರಿ (K.S Latha Kumari) ಅವರ ವಿರುದ್ಧ ಕಿಡಿಕಾರಿದ್ದಾರೆ.
ಹಾಸನದಲ್ಲಿ (Hassan) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಾನು ಆರ್‌ಟಿಐನಲ್ಲಿ ಮೀಸಲಾತಿ ಪಟ್ಟಿ ತೆಗೆದುಕೊಂಡಿದ್ದೇನೆ. ಅವರಿಗೆ ವೈಯುಕ್ತಿಕ ಪೋನ್ ಕರೆ ಮಾಡಿದ್ದೇನೆ, ಅವರು ರಿಸೀವ್ ಮಾಡಿಲ್ಲ. ಜನಕ್ಕೆ ನೋವಾದಾಗ ನಾನು ಮಾತನಾಡಲೇಬೇಕು ಎಂದರು. ಇದನ್ನೂ ಓದಿ: ಹಾಸನ ಡಿಸಿ ಲತಾಕುಮಾರಿ ಎಕ್ಸ್ ಪೋಸ್ಟ್ – ಹೆಚ್.ಡಿ ರೇವಣ್ಣ ಆರೋಪಕ್ಕೆ ಪರೋಕ್ಷ ಟಾಂಗ್?
ತಹಶೀಲ್ದಾರ್ ಯಾವ ಆಧಾರದ ಮೇಲೆ ಪಟ್ಟಿ ಕಳುಹಿಸಿದರು? ಎಲ್ಲಾ ತಹಶೀಲ್ದಾರ್‌ಗೆ ಪ್ರಪೋಸಲ್ ಕಳುಹಿಸಲು ಯಾರು ಹೇಳಿದ್ದು? ಒಬ್ಬ ರಾಜಕಾರಣಿ ಹೇಳಿದಂತೆ ಮೀಸಲಾತಿ ಪಟ್ಟಿ ನಿಗದಿ ಮಾಡಿದ್ದಾರೆ. ಅವರ ಹೆಸರು ಸಮಯ ಬಂದಾಗ ಹೇಳುತ್ತೇನೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಅಧಿಕಾರಿಗಳಿಗೆ ಎಷ್ಟು ನೋವು ಕೊಡುತ್ತಿದ್ದಾರೆ ಎಂದು ಗೊತ್ತಿದೆ.

ಇನ್ನೂ ಒಂದುವರೆ ವರ್ಷ ಇವರೇ ಇರಬೇಕು. ನಾನು ಕಳೆದ ಒಂದುವರೆ ವರ್ಷದಿಂದ ಅವರ ಕಚೇರಿಗೆ ಹೋಗಿಲ್ಲ. ನಮ್ಮ ಮುಂದೆ ಅಧಿಕಾರಿಗಳಿಗೆ ಏಕವಚನದಲ್ಲೇ ಬೈತಾರೆ. ನನ್ನ ಮೂವತ್ತು ವರ್ಷ ರಾಜಕೀಯದಲ್ಲಿ ಎಂಥೆಂಥ ಸೀನಿಯರ್ ಆಫೀಸರ್ ನೋಡಿದ್ದೇನೆ. ಜಿಲ್ಲಾಧಿಕಾರಿ ಅಷ್ಟು ನಾನು ಐಎಎಸ್ ಓದಿಲ್ಲ, ಅವರಷ್ಟು ಅನುಭವವಿಲ್ಲ. ನಾನು ಓದಿರುವುದು ಕಡಿಮೆ. ಅವರಿಗೆ ನೋವಾಗದಂತೆ ನಾನು ಹೇಗೆ ನಡೆದುಕೊಳ್ಳಬೇಕು ಅಂಥ ಅವರೇ ಹೇಳಲಿ. ನಾನೊಬ್ಬ ಆರ್ಡಿನರಿ ಶಾಸಕ, ಜನರ ಕೂಲಿ ಮಾಡುತ್ತಿದ್ದೇನೆ. ಎರಡು ಕಾಲು ಲಕ್ಷ ಜನರಿಗೆ ಕೂಲಿ ಮಾಡುತ್ತಿದ್ದೇನೆ ಎಂದರು.
ಎರಡ್ಮೂರು ಬಾರಿ ಹೋಗಿದ್ದೇನೆ, ಅಧಿಕಾರಿಗಳು ವಿವರಿಸಲು ಬಂದರೆ ಆಚೆಗೆ ನೂಕ್ತಾರೆ. ನಾವು ಹೇಳಲು ಹೋದರೆ ತಪ್ಪು ತಿಳಿದುಕೊಳ್ತಾರೆ. ನಾನು ಸುಮಾರು ಜನ ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ಇವರ ವರ್ತನೆಯಿಂದ ಬೇಜಾರಾಗಿದೆ. ಮುಂದಿನ ಸೋಮವಾರ ಎಲೆಕ್ಷನ್ ಕಮಿಷನ್, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುತ್ತೇವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ನನ್ನ ಎದುರು ಇವರನ್ನು ಕರೆಸಲಿ, ಏನೇನು ನಡೆದಿದೆ ಹೇಳ್ತಿನಿ. ಕಾನೂನು ವಿರುದ್ಧವಾಗಿ ಏನೇನು ಮಾಡುತ್ತಿದ್ದಾರೆ ಸವಿಸ್ತಾರವಾಗಿ ಹೇಳ್ತೇನೆ ಎಂದರು.
ಆರ್‌ಟಿಐನಲ್ಲಿ ಅರ್ಜಿ ಹಾಕಿ ಮೀಸಲಾತಿ ಪಟ್ಟಿ ತೆಗೆದುಕೊಂಡಿದ್ದೇನೆ. ನಾನು ಡಿಸಿ ಅವರಿಂದ ಕಲಿಯಬೇಕಿಲ್ಲ.ಕಾನೂನು ಏನಿದೆ ಎಂದು ನನಗೆ ಗೊತ್ತಿದೆ. ತಹಶೀಲ್ದಾರ್‌ಗೆ ರೈಟ್ಸ್ ಇಲ್ಲ ಅಂದ ಮೇಲೆ ಪಟ್ಟಿ ಹೇಗೆ ಕಳುಹಿಸಿದ್ರು? ಹಾಗಾದರೆ ಅವರನ್ನು ಸಸ್ಪೆಂಡ್ ಮಾಡಲಿ. ಡಿಸಿಗೆ ಸೌಜನ್ಯ ಇದ್ದರೆ ಒಂದು ಬಾರಿಯಾದರೂ ನನ್ನನ್ನು ಕೇಳಬಹುದಿತ್ತು.
ಆರು ತಿಂಗಳು ಎಂಎಲ್‌ಎ ಗ್ರಾಂಟ್ ಕೊಡಲಿಲ್ಲ. ಎಲ್ಲೂ ನ್ಯಾಯ ಸಿಗದಿದ್ದಾಗ ಯಾವ ಅಥಾರಿಟಿಲಿ ಸಿಗುತ್ತೆ ಅಲ್ಲಿಗೆ ಕಾರ್ಯಕರ್ತರು ಹೋಗ್ತಾರೆ. ನಮ್ಮನ್ನು ಹಗುರವಾಗಿ ಕಂಡಾಗ ಯಾವ ರೀತಿ ಕಾಣಬೇಕು ಗೊತ್ತಿದೆ. ಈ ಜಿಲ್ಲಾಧಿಕಾರಿಯಿಂದ ಕಲಿಯಬೇಕಿಲ್ಲ ನಾನು. ಪಾಪ ಅವರಿಗೆ ದೇವರು ಒಳ್ಳೆಯದು ಮಾಡಲಿ.
ಕಳೆದ ಬಾರಿ ಹಾಸನಾಂಬ ಉತ್ಸವಕ್ಕೆ ಸೌಜನ್ಯಕ್ಕಾದರೂ ಕರೆದಿಲ್ಲ. ಈ ಸಾರಿ ನಾನು ಹಾಸನಾಂಬ ದೇವಾಲಯಕ್ಕೆ ಹೋಗುವುದೇ ಇಲ್ಲ, ಯಾಕೆ ಹೋಗಬೇಕು? ದುರಹಂಕಾರ ಇದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ನಾನೇನು ಕೆಟ್ಟದಾಗಿ ನಡೆದುಕೊಂಡಿಲ್ಲ, ಹಾಗೇನಾದರೂ ಇದ್ದರೆ ತಿದ್ದಿಕೊಳ್ತಿನಿ.
ಅಧಿಕಾರಿಗಳಿಗೆ ನನ್ನ ರೀತಿ ಗೌರವ ಕೊಡುವವರು ಯಾರು ಇಲ್ಲ. ನಮ್ಮ ಜನತೆಗೆ ನೋವಾದಾಗ ಸುಮ್ಮನೆ ಕೂರಲು ಆಗಲ್ಲ. ಸಾಮಾನ್ಯ ಜನರ ಕಷ್ಟ ಸುಖ ವಿಚಾರಿಸಿದಾಗ ಐಎಎಸ್ ಪೋಸ್ಟ್‌ಗೆ ಗೌರವ ಬರುತ್ತೆ. ನನಗೂ ಗೈಡ್‌ಲೈನ್ಸ್ ಗೊತ್ತಿದೆ. ಎಲ್ಲಿ ಹೇಳಬೇಕೋ ಅಲ್ಲಿ ಹೇಳ್ತಿನಿ. ʻನಮ್ಮದೇನು ಇಲ್ಲಾ ಸರ್, ಒಬ್ಬ ರಾಜಕಾರಣಿ ಕೂರಿಸಿಕೊಂಡು ಅವರು ಏನು ಹೇಳ್ತಾರೆ, ಆ ರೀತಿ ಪ್ರಪೋಸಲ್ ಕಳುಹಿಸಬೇಕುʼ ಎಂದು ಡಿಸಿ ಅವರು ಹೇಳಿದ್ದಾರೆ ಎಂದು ಹಾಸನ ತಹಶೀಲ್ದಾರ್ ಹೇಳ್ತಾರೆ. ಅಧಿಕಾರಿ ಇದೆ ಎಂದು ಡಿಸಿ ಏನು ಬೇಕಾದರೂ ಮಾಡಬಹುದಾ? ಕಾನೂನು ಉಲ್ಲಂಘನೆ ಮಾಡಬಹುದಾ? ಸಣ್ಣಪುಟ್ಟ ಆಫೀಸರ್‌ಗಳನ್ನು ಬೆಳಿಗ್ಗೆಯಿಂದ ಸಂಜೆ ಐದು ಗಂಟೆಯವರೆಗೆ ಕೂರಿಸಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಎಷ್ಟು ನೋವು ಕೊಡ್ತಾ ಇದ್ದಾರೆ. ಗುಮಾಸ್ತರುಗಳಿಗೆ ನರಕಯಾತನೆ ಕೊಡುತ್ತಿದ್ದಾರೆ. ಇಲ್ಲ ಎಂದು ಹಾಸನಾಂಬೆ ಮುಂದೆ ಸತ್ಯ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನಾನು ಯಾವ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಲು ಹೋಗಿಲ್ಲ. ಮಹಿಳೆಯರಿಗೆ 33% ಮೀಸಲಾತಿ ತಂದಿದ್ದು ನಾವು. ಇವರಿಂದ ನಾನು ಏನೂ ಕಲಿಯಬೇಕಿಲ್ಲ ಎಂದಿದ್ದಾರೆ. ಇದನ್ನೂ ಓದಿ: 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಡಿಸಿ ನೋಡಿಲ್ಲ – ಕೆ.ಎಸ್ ಲತಾಕುಮಾರಿ ವಿರುದ್ಧ ಹೆಚ್.ಡಿ.ರೇವಣ್ಣ ಕೆಂಡಾಮಂಡಲ
