– ಬಿಜೆಪಿ, ಆರ್ಎಸ್ಎಸ್ನಿಂದ ಕಾಂಗ್ರೆಸ್ ಕಲಿಯಬೇಕಾದದ್ದು ಏನೂ ಇಲ್ಲ
ನವದೆಹಲಿ: ಕಳೆದ 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಪ್ರಮಾಣದ ಹಾನಿ ಮಾಡಿದೆ ಎಂದು ಕಾಂಗ್ರೆಸ್ (Congress) ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಆರೋಪಿಸಿದ್ದಾರೆ.
ತಮ್ಮ ಮುಂಬರುವ ಆತ್ಮಕಥನದ ಬಿಡುಗಡೆ ಹಿನ್ನೆಲೆ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಕೇಂದ್ರ ಸರ್ಕಾರದ ಆಡಳಿತ ಹಾಗೂ ಕಾಂಗ್ರೆಸ್ನ ರಾಜಕೀಯ ಭವಿಷ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ, ಕಳೆದ 12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಸಾಕಷ್ಟು ಹಾನಿಯಾಗಿದೆ. ಪ್ರಸ್ತುತ ಸರ್ಕಾರ ಅಧಿಕಾರದಿಂದ ಹೊರಬಂದ ನಂತರವೂ ದೇಶದ ವ್ಯವಸ್ಥೆಗಳನ್ನು ಮತ್ತೆ ಆರೋಗ್ಯಕರ ಸ್ಥಿತಿಗೆ ತರಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳ ನಿರಂತರ ಪ್ರಯತ್ನ ಅಗತ್ಯವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೆಂಗ್ವಿನ್ ಬದಲು ಹಾರ್ಪರ್ಕಾಲಿನ್ಸ್ನಲ್ಲಿ ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟ – ನ.10ಕ್ಕೆ ‘ಬಿಲಾಂಗಿಂಗ್’ ಬಿಡುಗಡೆ
ಕಾಂಗ್ರೆಸ್ ಪಕ್ಷದ ರಾಜಕೀಯ ಕುಸಿತ ಹಾಗೂ ಭವಿಷ್ಯದ ಕುರಿತು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಸಮಾನ ರಾಜಕೀಯ ಅವಕಾಶಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಸೇರಿದಂತೆ ವಿವಿಧ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಡಳಿತಾರೂಢ ಪಕ್ಷದ ಪ್ರಭಾವವಿದೆ. ಮುಖ್ಯವಾಹಿನಿ ಮಾಧ್ಯಮಗಳ ಮೇಲಿನ ನಿಯಂತ್ರಣ, ಆರ್ಥಿಕ ಬಲ ಹಾಗೂ ಧರ್ಮದ ರಾಜಕೀಯ ಬಳಕೆಯೂ ವಿರೋಧ ಪಕ್ಷಗಳಿಗೆ ಸವಾಲಾಗಿದೆ ಎಂದು ದೂರಿದ್ದಾರೆ.
ಇಷ್ಟೆಲ್ಲ ಸವಾಲುಗಳ ನಡುವೆಯೂ ಕಾಂಗ್ರೆಸ್ ಪಕ್ಷ ಹೋರಾಟ ಮುಂದುವರಿಸಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ವಿವಿಧ ರೀತಿಯ ಕಿರುಕುಳಗಳನ್ನು ಎದುರಿಸಿದ್ದಾರೆ. ಆದರೂ ದೇಶದ ಪ್ರತಿಯೊಂದು ಗ್ರಾಮ ಮತ್ತು ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂವಿಧಾನದ ಮೌಲ್ಯಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಹಲವು ಚುನಾವಣೆಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿದೆ. ಕಾಂಗ್ರೆಸ್ ಪಕ್ಷವು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದು, ಪಕ್ಷದ ರಾಜಕೀಯ ಭವಿಷ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಏನನ್ನು ಕಲಿಯಬೇಕು ಎಂಬ ಪ್ರಶ್ನೆಗೆ, ಮೋದಿ ಅವರ ಸೈದ್ಧಾಂತಿಕ ಹಿನ್ನೆಲೆ ಕಾಂಗ್ರೆಸ್ಗಿಂತ ಭಿನ್ನವಾಗಿದೆ. ಕಾಂಗ್ರೆಸ್ನಲ್ಲಿಯೂ ಯಶಸ್ವಿ ರಾಜಕೀಯ ನಾಯಕರ ಉದಾಹರಣೆಗಳಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಪಕ್ಷದಲ್ಲೇ ರಾಜಕೀಯವಾಗಿ ಬೆಳೆದಿದ್ದಾರೆ. ಹೀಗಾಗಿ ಬಿಜೆಪಿ ಅಥವಾ ಆರ್ಎಸ್ಎಸ್ನಿಂದ ಕಾಂಗ್ರೆಸ್ ಕಲಿಯಬೇಕಾದದ್ದು ಹೆಚ್ಚೇನೂ ಇಲ್ಲ ಎಂದು ಹೇಳಿದ್ದಾರೆ.
2004ರಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ತಾವು ಪ್ರಧಾನಿಯಾಗಿದ್ದರೆ ಸರ್ಕಾರದ ನೀತಿಗಳು ಹೇಗೆ ಬದಲಾಗುತ್ತಿದ್ದವು ಎಂಬ ಪ್ರಶ್ನೆಗೆ, ಅಂತಹ ಆಲೋಚನೆ ನನ್ನ ಮನಸ್ಸಿಗೆ ಬಂದಿಲ್ಲ. ಅಂದಿನ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಆಡಳಿತದ ನೇತೃತ್ವ ವಹಿಸಿದ್ದರೆ, ತಾವು ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದಾಗಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರ 544 ಪುಟಗಳ ಆತ್ಮಕಥನ ‘Belonging: A Journey of Love’ ನವೆಂಬರ್ 10ರಂದು ಹಾರ್ಪರ್ಕಾಲಿನ್ಸ್ ಪ್ರಕಾಶನದ ಮೂಲಕ ಬಿಡುಗಡೆಯಾಗಲಿದೆ. ತಮ್ಮ ಬಾಲ್ಯದ ದಿನಗಳು, ರಾಜೀವ್ ಗಾಂಧಿ ಅವರೊಂದಿಗಿನ ಪರಿಚಯ, ವಿವಾಹ, ಗಾಂಧಿ ಕುಟುಂಬದ ದುರಂತ ಘಟನೆಗಳು ಹಾಗೂ ಭಾರತದ ರಾಜಕೀಯ ಜೀವನದ ಅನುಭವಗಳನ್ನು ಈ ಪುಸ್ತಕ ಒಳಗೊಂಡಿದೆ. ಇದನ್ನೂ ಓದಿ: E20 ಈಗ 420 ಆಗಿದೆ, ಜನರ ವಾಹನಗಳ ಪೆಟ್ರೋಲ್ ಕದಿಯಲಾಗುತ್ತಿದೆ – ಮೋದಿ ಸರ್ಕಾರದ ವಿರುದ್ಧ ರಾಗಾ ಕಿಡಿ


