– ಗೊಂದಲ ಇತ್ಯರ್ಥ ಆಗೋವರೆಗೆ ʻಯೂಸರ್ ನೇಮ್ʼ ವೈಶಿಷ್ಟ್ಯ ಭಾರತಕ್ಕೆ ಬರಲ್ಲ; ಮೆಟಾ
ನವದೆಹಲಿ: ಟೆಕ್ ದೈತ್ಯ ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರವು, ʻಮೆಸೇಜಿಂಗ್ ಆ್ಯಪ್ ವಾಟ್ಸಪ್ (WhatsApp) ಯೂಸರ್ ನೇಮ್ (Username)ʼ ವೈಶಿಷ್ಟ್ಯತೆ ಕುರಿತು ಎದ್ದಿರುವ ಕಳವಳಗಳ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಮತ್ತೆ ಮೂರು ದಿನ ಕಾಲಾವಕಾಶ ನೀಡಿದೆ.
ಮೆಟಾ ಸಂಸ್ಥೆಯು ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೋರಿದ ಹಿನ್ನೆಲೆ ಕೇಂದ್ರ ಸರ್ಕಾರ (Central Government) ಹೆಚ್ಚುವರಿಯಾಗಿ ಮೂರು ದಿನಗಳ ಸಮಯ ನೀಡಿದೆ. ಇದನ್ನೂ ಓದಿ: ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಿ – ಏನಿದು ಹೊಸ ವಾಟ್ಸಪ್ ಅಪ್‌ಡೇಟ್?
ಈ ಮಧ್ಯೆ ಎಲ್ಲಾ ಚರ್ಚೆಗಳು, ಗೊಂದಲಗಳು ಇತ್ಯರ್ಥ ಆಗೋವರೆಗೆ ಭಾರತದಲ್ಲಿ ವಾಟ್ಸಪ್‌ನ ಹೊಸ ವೈಶಿಷ್ಟ್ಯ ಬಳಕೆಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮೆಟಾ ಸಂಸ್ಥೆ ಭರವಸೆ ನೀಡಿದೆ. ಈ ಸಂಬಂಧ ಮೆಟಾ ಕಳೆದ ವಾರ ಸಮನ್ಸ್ ಜಾರಿಗೊಳಿಸಿದ ಬಳಿಕ ಐಟಿ ಸಚಿವಾಲಯದ ಅಧಿಕಾರಿಗಳನ್ನ ಭೇಟಿ ಮಾಡಿತ್ತು. ಇದನ್ನೂ ಓದಿ: ನಕಲಿ ಖಾತೆ, ವಂಚನೆ ಆತಂಕ – ವಾಟ್ಸಪ್ ಹೊಸ ವೈಶಿಷ್ಟ್ಯದ ಮೇಲೆ ಕೇಂದ್ರ ಹದ್ದಿನ ಕಣ್ಣು

ಕೇಂದ್ರದ ಕಳವಳ ಏನು?
ಮೆಟಾ ಸಂಸ್ಥೆಯು ಬಳಕೆದಾರರ ಗೌಪ್ಯತೆಯನ್ನು (Privacy) ಬಲಪಡಿಸಲು ಬಳಕೆದಾರರು ತಮ್ಮ ವೈಯಕ್ತಿಕ ಫೋನ್ ನಂಬರ್ ಹಂಚಿಕೊಳ್ಳದೆಯೇ ಇತರರೊಂದಿಗೆ ಚಾಟ್ ಮಾಡಲು ಅನುವು ಮಾಡಿಕೊಡುವ ಯೂಸರ್ ನೇಮ್ ವೈಶಿಷ್ಟ್ಯವನ್ನು ವಾಟ್ಸಪ್ ಪರೀಕ್ಷಿಸುತ್ತಿದೆ. ಶೀಘ್ರದಲ್ಲೇ ಇದನ್ನು ಭಾರತಕ್ಕೂ ಪರಿಚಯಿಸಲು ಮುಂದಾಗಿದೆ. ಆದ್ರೆ ಇದರ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: NEET Paper Leak| ಟೆಲಿಗ್ರಾಮ್ ಮೇಲೆ ಕ್ರಮ – ವಾಟ್ಸಪ್ ಮೇಲೆ ನಿಷೇಧ ಯಾಕಿಲ್ಲ?
ಹೊಸ ವೈಶಿಷ್ಟ್ಯದಿಂದ ನಕಲಿ ಖಾತೆಗಳನ್ನ (Fake Account) ಸೃಷ್ಟಿಸುವುದು, ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ವಂಚನೆ ನಡೆಸುವುದು ಹಾಗೂ ಸೈಬರ್ ಅಪರಾಧಗಳಿಗೆ ಅವಕಾಶ ಹೆಚ್ಚುವ ಸಾಧ್ಯತೆ ಇದೆ. ಯೂಸರ್‌ನೇಮ್ (Username) ವ್ಯವಸ್ಥೆ ಜಾರಿಯಾದರೆ ಯಾರಾದರೂ ಮತ್ತೊಬ್ಬರ ಹೆಸರಿನಂತೆಯೇ ಕಾಣುವ ಖಾತೆಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನ ದಾರಿ ತಪ್ಪಿಸಬಹುದು. ಇದರಿಂದ ಗುರುತಿನ ಕಳವು, ಹಣಕಾಸು ವಂಚನೆ ಹಾಗೂ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಲೂಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
ಇದು ಸಾರ್ವಜನಿಕ ವೇದಿಕೆಗಳಲ್ಲೂ ಚರ್ಚೆಗೆ ಗ್ರಾಸವಾದ ಹಿನ್ನೆಲೆ ಎಲ್ಲಾ ಕಾಳಜಿಗಳ ಕುರಿತು ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ವೈಶಿಷ್ಟವನ್ನು ಬಳಕೆಗೆ ತರದಂತೆ ತಡೆಹಿಡಿದಿದೆ.
