ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ ಮಾಳೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಯಲ್ಲಿ ಒಂದು ಕೋಟಿ ರೂ. ಮೌಲ್ಯದ ಬಂಗಾರದ ವಸ್ತುವಿನ ಜೊತೆಗೆ ಆರೋಪಿಯನ್ನ ಸಹ ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿಯ ಮಹಿಷಿ ಗ್ರಾಮದಲ್ಲಿರುವ ಶ್ರೀ ಸತ್ಯಸಂಧ ಉತ್ತರಾದಿ ಮಠದಲ್ಲಿ ಜೂ.17 ರ ಸಂಜೆ ವೇಳೆಗೆ ಸುಮಾರು 1.1 ಕೋಟಿ ಮೌಲ್ಯದ 780 ಗ್ರಾಂ ತೂಕದ ಬಂಗಾರದ 16 ಹಲಗಾರತಿಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಮಾಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ತಕ್ಷಣವೇ ಪ್ರಕರಣದ ಬೆನ್ನತ್ತಿದ್ದ ಮಾಳೂರು ಪೊಲೀಸ್ ಠಾಣೆಯ ಪೊಲೀಸರು, ಶಿವಮೊಗ್ಗದ ಗಾಂಧಿನಗರದ 25 ವರ್ಷದ ರಾಘವೇಂದ್ರ ಆಚಾರ್ಯ ಬಿನ್ ವಿಜಯೇಂದ್ರ ಆಚಾರ್ಯ ಎಂಬಾತನನ್ನು ವಶಕ್ಕೆ ಪಡೆದು, ಕಳ್ಳತನ ಮಾಡಿದ್ದ ಬಂಗಾರದ ಹಲಗಾರತಿಗಳನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಶಿವಮೊಗ್ಗ ಎಸ್ಪಿ ಬಿ.ನಿಖಿಲ್, ಘಟನೆ ನಡೆದ 24 ಗಂಟೆಯಲ್ಲೇ ನಮ್ಮ ತಂಡ ಪ್ರಕರಣ ಬೇಧಿಸಿದೆ. ಆರೋಪಿ ರಾಘವೇಂದ್ರ ಆಚಾರ್ಯ ಎಂಬಾತನನ್ನು ಬಂಧಿಸಿ, ಎಲ್ಲಾ ಆಭರಣಗಳನ್ನು ರಿಕವರ್ ಮಾಡಲಾಗಿದೆ. ರಾಘವೇಂದ್ರ ಅಚಾರ್ಯ ಮಹಿಷಿ ಮಠದ ಗುರುಗಳ ಜೊತೆ ಇದ್ದ. ಗುರುಗಳ ಇನ್ನೊಬ್ಬ ಶಿಷ್ಯನ ಜೊತೆ ರಾಘವೇಂದ್ರಗೆ ವೈಷಮ್ಯ ಇತ್ತು. ಆತನಿಗೆ ಕೆಟ್ಟ ಹೆಸರು ತರಲು ಈ ಕಳ್ಳತನ ಮಾಡಿದ್ದಾನೆ. ನಮ್ಮ ಅಧಿಕಾರಿ- ಸಿಬ್ಬಂದಿ ಆರೋಪಿಯನ್ನ ಬಂಧಿಸಿ, ಎಲ್ಲಾ ಮಾಲ್ ರಿಕವರ್ ಮಾಡಿದ್ದಾರೆ. ಪ್ರಕರಣ ಪತ್ತೆ ಹಚ್ಚಿದ ಪೋಲೀಸ್ ತಂಡಕ್ಕೆ ಹತ್ತು ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಶೇಷ ತಂಡ ರಚಿಸಿದ್ದ ಎಸ್ಪಿ:
ಇನ್ನು ಉತ್ತರಾದಿ ಮಠದಲ್ಲಿ ಕಳ್ಳತನ ನಡೆದ ಮಾಹಿತಿ ದೊರಕಿದ 30 ನಿಮಿಷದಲ್ಲೇ ಪೊಲೀಸ್ ಅಧಿಕಾರಿ- ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರಲ್ಲದೇ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುಮಾರು 1 ಕೋಟಿ ರೂ. ಮೌಲ್ಯದ ವಸ್ತು ಕಳ್ಳತನವಾದ ಹಿನ್ನೆಲೆ ವಿಶೇಷ ತಂಡವನ್ನ ಕೂಡ ರಚಿಸಲಾಗಿತ್ತು. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಠಾಣೆ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ಹಾಗೂ ಮಾಳೂರು ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್.ಎಲ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಪ್ರಕರಣ ಬೇಧಿಸಲಾಗಿದೆ. ಈ ತಂಡದಲ್ಲಿ ಮಾಳೂರು ಪಿ.ಐ.ಎಸ್ ಸುನಿಲ್, ಸಿಬ್ಬಂದಿಗಳಾದ ಅಂಗೇಗೌಡ, ಸುರಕ್ಷಿತ್, ಶ ಕುಮಾರ್, ರವಿ. ಸುರೇಶ್ ನಾಯ್ಕ, ಸಂತೋಷ್, ವಿನಯ್ ಕುಮಾರ್ ಹಾಗೂ ಚಾಲಕರಾದ ಅವಿನಾಶ್ ಇದ್ದರು.
