– ಜಿಮ್ ಟ್ರೈನರ್ ಪ್ರಿಯಕರನೊಂದಿಗೆ ಪತ್ನಿಯೂ ಅರೆಸ್ಟ್
ಲಕ್ನೋ: ತನ್ನ ಪತ್ನಿ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಜಿಮ್ ಟ್ರೈನರ್ವೊಬ್ಬ (Gym Trainer) ದೆಹಲಿ ಸರ್ಕಾರದ ಹಿರಿಯ ಅಕೌಂಟೆಂಟ್ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ಗಾಜಿಯಾಬಾದ್ನಲ್ಲಿ (Ghaziabad) ನಡೆದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ವಸುಂಧರಾ ಪ್ರದೇಶದಲ್ಲಿ ಶಶಾಂಕ್ ಕಂಥಾರಿಯಾ (35) ಎಂಬುವವರ ಮೇಲೆ ಹಲ್ಲೆ ನಡೆದಿದೆ. ಶಶಾಂಕ್ ಮಲಗಿದ್ದಾಗ ಜಿಮ್ ಟ್ರೈನರ್ 12 ಬಾರಿ ಚೂರಿಯಿಂದ ಇರಿದಿದ್ದಾನೆ. ಸದ್ಯ ಶಶಾಂಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಹೇಳಿದ್ದೇನು?
ಶಶಾಂಕ್ ಪತ್ನಿ ಪ್ರಿಯಾ (32) ಹಾಗೂ ಜಿಮ್ ಟ್ರೈನರ್ ಪ್ರತಾಪ್ ಸಿಂಗ್ (30) ನಡುವೆ ಅಕ್ರಮ ಸಂಬಂಧವಿತ್ತು. ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿ ಈ ವಿಚಾರ ತಿಳಿದ ಶಶಾಂಕ್, ಪತ್ನಿಯನ್ನ ಪ್ರಶ್ನಿಸಿ ಸಂಬಂಧ ಕಡಿದುಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ, ಕುಟುಂಬ ಸಮೇತ ದೆಹಲಿಗೆ ಸ್ಥಳಾಂತರಗೊಳ್ಳಲು ಮನೆ ಹುಡುಕುತ್ತಿದ್ದರು.
ಸೋಮವಾರ ಬೆಳಗ್ಗೆ ಪ್ರಿಯಾ ಜಿಮ್ಗೆ ತೆರಳಿದ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಿದ್ದರಿಂದ ಪ್ರತಾಪ್ ಒಳನುಗ್ಗಿದ್ದಾನೆ. ಮಲಗಿದ್ದ ಶಶಾಂಕ್ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಎಚ್ಚರಗೊಂಡ ಶಶಾಂಕ್ ಕೂಗಿಕೊಂಡಿದ್ದು, ಅವರ ಪುಟ್ಟ ಮಗಳ ಅಳುವಿನ ಸದ್ದು ಕೇಳಿ ನೆರೆಹೊರೆಯವರು ಧಾವಿಸಿದ್ದಾರೆ. ಸದ್ಯ ಮಗಳಿಗೆ ಯಾವುದೇ ಗಾಯಗಳಾಗಿಲ್ಲ.
ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಬಳಿಯಿಂದ 2 ಚೂರಿಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಶಾಂಕ್ ಅವರ ಸಹೋದರ ನೀಡಿದ ದೂರಿನ ಮೇರೆಗೆ ಪ್ರಿಯಾ ಮತ್ತು ಪ್ರತಾಪ್ ವಿರುದ್ಧ ಕೊಲೆ ಯತ್ನ, ಹಲ್ಲೆ ಉದ್ದೇಶದ ಮನೆ ಅತಿಕ್ರಮಣ ಹಾಗೂ ಕ್ರಿಮಿನಲ್ ಸಂಚು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

