ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರ ಎಂಬ ಕಾಲವೊಂದು ಇತ್ತು. ಆದರೆ ಇಂದು ಚಿತ್ರಣ ಸಂಪೂರ್ಣ ಬದಲಾಗಿದೆ. ಬೀದಿಬದಿಯ ಮಣ್ಣಿನ ಅಂಗಳದಲ್ಲಿ ಕೇವಲ ಮನರಂಜನೆಗಾಗಿ ಆಡುತ್ತಿದ್ದ ಬ್ಯಾಡ್ಮಿಂಟನ್(Badminton) ಇಂದು ಅತ್ಯಾಧುನಿಕ ಸಿಂಥೆಟಿಕ್ ಕೋರ್ಟ್‌ಗಳಲ್ಲಿ ಮಿಂಚುವ ಮೂಲಕ ಭಾರತದ (India) ಎರಡನೇ ಅತಿ ದೊಡ್ಡ ಕ್ರೀಡಾ ಕ್ರಾಂತಿಗೆ ನಾಂದಿ ಹಾಡಿದೆ. ಗಲ್ಲಿ ಆಟದ ಹವ್ಯಾಸದಿಂದ ಒಲಿಂಪಿಕ್ಸ್‌ನ ವೇದಿಕೆಯವರೆಗೆಈ ಕ್ರೀಡೆ ಭಾರತೀಯ ಯುವಜನತೆ ಮತ್ತು ಮಕ್ಕಳ ಹೊಸ ‘ಫಿಟ್‌ನೆಸ್ ಹಾಗೂ ಕ್ಯಾರಿಯರ್ ಮಂತ್ರ’ವಾಗಿ ಬೆಳೆದಿದೆ. ಹೀಗಾಗಿ ಇಲ್ಲಿ ಯುವ ಪೀಳಿಗೆ ಹಾಗೂ ಪೋಷಕರು ಈ ವೇಗದ ಆಟಕ್ಕೆ ಇಷ್ಟೊಂದು ಮಾರುಹೋಗುತ್ತಿರುವುದರ ಹಿಂದಿನ ಅಸಲಿ ಶಕ್ತಿ ಮತ್ತು ಕಾರಣಗಳನ್ನು ತಿಳಿಸಲಾಗಿದೆ.
ಭಾರತೀಯರ ಸಾಧನೆಗಳು
ಭಾರತದಲ್ಲಿ ಕ್ರಿಕೆಟ್ (Cricket) ಜನಪ್ರಿಯವಾಗಲು ಕಾರಣ 1983ರ ವಿಶ್ವಕಪ್ ಕ್ರಿಕೆಟ್. ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಕ್ರಿಕೆಟ್ ಹಳ್ಳಿ ಹಳ್ಳಿಗಳಿಗೆ ತಲುಪಿತು. ಅದೇ ರೀತಿಯಾಗಿ ಬ್ಯಾಡ್ಮಿಂಟನ್ ಇಂದು ಫೇಮಸ್ ಆಗಲು ಕಾರಣ ಭಾರತದ ಆಟಗಾರರ ಸಾಧನೆ. ಜಾಗತಿಕ ವೇದಿಕೆಯಲ್ಲಿ ಶಟ್ಲರ್‌ಗಳು ನಿರಂತರವಾಗಿ ಜಯಭೇರಿ ಬಾರಿಸುತ್ತಿರುವುದು ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಿದೆ.
ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಭಾರತೀಯ ಬ್ಯಾಡ್ಮಿಂಟನ್‌ನ ಸುವರ್ಣ ಯುಗಕ್ಕೆ ಮುನ್ನುಡಿ ಬರೆದರು. ಸೈನಾ ನೆಹ್ವಾಲ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬ್ಯಾಡ್ಮಿಂಟನ್ ಪದಕ ತಂದುಕೊಟ್ಟರು.

ಪಿ.ವಿ. ಸಿಂಧು ಸತತ ಎರಡು ಒಲಿಂಪಿಕ್ ಪದಕಗಳು ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದರು. ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್, ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಆಯುಷ್ ಶೆಟ್ಟಿ, ಟ್ರೀಸಾ ಜೋಲಿ, ಗಾಯತ್ರಿ ಗೋಪಿಚಂದ್ ಅವರ ಆಟಗಳು ಯುವ ಜನರನ್ನು ಸೆಳೆಯುತ್ತಿವೆ.
ಸುಲಭ ಲಭ್ಯತೆ ಮತ್ತು ಕಡಿಮೆ ವೆಚ್ಚ
ಟೆನಿಸ್ ಅಥವಾ ಗಾಲ್ಫ್‌ನಂತಹ ಇತರ ಕ್ರೀಡೆಗಳಿಗೆ ಹೋಲಿಸಿದರೆ ಬ್ಯಾಡ್ಮಿಂಟನ್ ಆಡಲು ಹೆಚ್ಚಿನ ಹಣದ ಅಗತ್ಯವಿಲ್ಲ. ಕ್ರಿಕೆಟ್ ಆಡಬೇಕಾದರೆ ದೊಡ್ಡ ಮೈದಾನ ಬೇಕಾಗುತ್ತದೆ. ಆದರೆ ಬ್ಯಾಡ್ಮಿಂಟನ್‌ನಲ್ಲಿ ಕೇವಲ ಎರಡು ರಾಕೆಟ್‌ಗಳು ಮತ್ತು ಒಂದು ಶಟಲ್‌ಕಾಕ್ ಇದ್ದರೆ ಎಲ್ಲಿ ಬೇಕಾದರೂ ಆಡಬಹುದು. ನಗರ ಪ್ರದೇಶಗಳಲ್ಲಿ ಒಳಾಂಗಣ (Indoor) ಕೋರ್ಟ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಇದು ಸುಲಭವಾಗಿ ಲಭ್ಯವಾಗುತ್ತಿದೆ.
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್
ಕ್ರಿಕೆಟ್‌ನ ಐಪಿಎಲ್ ಮಾದರಿಯಲ್ಲಿ ಆರಂಭವಾದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (PBL) ಕ್ರೀಡೆಗೆ ವಾಣಿಜ್ಯಕ ಯಶಸ್ಸು ಮತ್ತು ಗ್ಲಾಮರ್ ತಂದುಕೊಟ್ಟಿದೆ. ಸ್ಟಾರ್ ಆಟಗಾರರ ಪಂದ್ಯಗಳು ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗುತ್ತಿರುವುದರಿಂದ ಕ್ರೀಡೆಗೆ ಪ್ರೇಕ್ಷಕರ ಬಳಗ ಮತ್ತು ಕಾರ್ಪೊರೇಟ್ ಪ್ರಾಯೋಜಕತ್ವ (Sponsorship) ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಆಟಗಾರರೇ ಸೇರಿ ಟೂರ್ನಿ ಆಯೋಜಿಸುತ್ತಿರುವುದರಿಂದ ಈ ಕ್ರೀಡೆ ಜನಪ್ರಿಯವಾಗುತ್ತಿದೆ.

ವಿಶ್ವದರ್ಜೆಯ ತರಬೇತಿ ಅಕಾಡೆಮಿಗಳು
ಹೈದರಾಬಾದ್‌ನಲ್ಲಿರುವ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಮತ್ತು ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗಳಂತಹ ಅತ್ಯಾಧುನಿಕ ತರಬೇತಿ ಕೇಂದ್ರಗಳು ಭಾರತದಲ್ಲೇ ಅಂತರರಾಷ್ಟ್ರೀಯ ಮಟ್ಟದ ಕೋಚಿಂಗ್ ನೀಡುತ್ತಿವೆ. ಇದರಿಂದಾಗಿ ಯುವ ಆಟಗಾರರು ವಿದೇಶಗಳಿಗೆ ಹೋಗುವ ಅಗತ್ಯವಿಲ್ಲದೇ ತಾಯ್ನಾಡಿನಲ್ಲೇ ಉತ್ತಮ ತರಬೇತಿ ಪಡೆಯುತ್ತಿದ್ದಾರೆ.
ಆರೋಗ್ಯ ಮತ್ತು ಫಿಟ್‌ನೆಸ್ ಜಾಗೃತಿ
ಆಧುನಿಕ ಜಗತ್ತಿನಲ್ಲಿ ಫಿಟ್‌ನೆಸ್ ಕಡೆಗೆ ಜನರ ಒಲವು ಹೆಚ್ಚಾಗಿದೆ. ಅದರಲ್ಲೂ ಕೋವಿಡ್ ಬಂದ ಬಳಿಕ ಯುವ ಜನತೆ ಆರೋಗ್ಯದ ಕಡೆ ಗಮನ ನೀಡುತ್ತಿದ್ದಾರೆ. ಬ್ಯಾಡ್ಮಿಂಟನ್ ಇಡೀ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ನೀಡುವ ಕ್ರೀಡೆಯಾಗಿದೆ. ಹೀಗಾಗಿ, ಕೇವಲ ವೃತ್ತಿಪರರಷ್ಟೇ ಅಲ್ಲದೆ ಐಟಿ ಉದ್ಯೋಗಿಗಳು, ಹಿರಿಯ ನಾಗರಿಕರು ಮತ್ತು ಮಕ್ಕಳು ತಮ್ಮ ದೈನಂದಿನ ಆರೋಗ್ಯಕ್ಕಾಗಿ ವೀಕೆಂಡ್ ಕ್ಲಬ್‌ಗಳನ್ನು ಸೇರಿ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ.
ಸರ್ಕಾರದ ಪ್ರೋತ್ಸಾಹ
ಕಳೆದ ಒಂದು ದಶಕದಿಂದ ಭಾರತ ಸರ್ಕಾರವು ಕ್ರೀಡೆಗಳಿಗೆ ಅಭೂತಪೂರ್ವ ಬೆಂಬಲ ನೀಡುತ್ತಿದೆ. ‘ಖೇಲೋ ಇಂಡಿಯಾ’ ಯೋಜನೆಯ ಮೂಲಕ ಶಾಲಾ-ಕಾಲೇಜು ಮಟ್ಟದಲ್ಲೇ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಿ, ಅವರಿಗೆ ವಿದ್ಯಾರ್ಥಿವೇತನ (Scholarship) ಮತ್ತು ಉಚಿತ ತರಬೇತಿ ನೀಡಲಾಗುತ್ತಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯವಿರುವ ಆಟಗಾರರಿಗೆ ವಿದೇಶಿ ಕೋಚ್‌ಗಳು, ಫಿಸಿಯೋಗಳು ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಸರ್ಕಾರವೇ ಸಂಪೂರ್ಣ ಹಣಕಾಸಿನ ನೆರವು ನೀಡಲು ಟಾಪ್ಸ್ ಯೋಜನೆ (TOPS – Target Olympic Podium Scheme) ಪ್ರಕಟಿಸಿದೆ.

ಕಾರ್ಪೊರೇಟ್ ಹೂಡಿಕೆ ಮತ್ತು ಪ್ರಾಯೋಜಕತ್ವ
ಹಿಂದೆ ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದ್ದ ಪ್ರಾಯೋಜಕತ್ವಗಳು (Sponsorships) ಈಗ ಬ್ಯಾಡ್ಮಿಂಟನ್ ಕಡೆಗೂ ಹರಿದು ಬರುತ್ತಿವೆ. ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ (OGQ) ಮತ್ತು ಗೋಸ್ಪೋರ್ಟ್ಸ್ ಫೌಂಡೇಶನ್‌ನಂತಹ ಸಂಸ್ಥೆಗಳು ಯುವ ಆಟಗಾರರನ್ನು ದತ್ತು ಪಡೆದು, ಅವರಿಗೆ ಅಗತ್ಯವಿರುವ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುತ್ತಿವೆ. ಇದರಿಂದಾಗಿ ಮಧ್ಯಮ ವರ್ಗದ ಪೋಷಕರು ಕೂಡ ತಮ್ಮ ಮಕ್ಕಳನ್ನು ಧೈರ್ಯವಾಗಿ ಬ್ಯಾಡ್ಮಿಂಟನ್ ಕ್ರೀಡೆಗೆ ಸೇರಿಸುತ್ತಿದ್ದಾರೆ.
ಪೋಷಕರ ಮನಸ್ಥಿತಿಯಲ್ಲಿ ಬದಲಾವಣೆ
ಹಿಂದೆ ಪೋಷಕರು ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದರು. ಆದರೆ ಈಗ ಬ್ಯಾಡ್ಮಿಂಟನ್ ಅನ್ನು ಒಂದು ಸುರಕ್ಷಿತ ಮತ್ತು ಗೌರವಾನ್ವಿತ ವೃತ್ತಿ ಬದುಕು (Career) ಎಂದು ಸ್ವೀಕರಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಟಗಾರರಿಗೆ ರೈಲ್ವೆ, ಬ್ಯಾಂಕಿಂಗ್ ವಲಯಗಳಲ್ಲಿ ಉದ್ಯೋಗದ ಸೌಲಭ್ಯ ದೊರೆಯುತ್ತಿರುವುದು ಪೋಷಕರಿಗೆ ಹೆಚ್ಚಿನ ಭರವಸೆ ನೀಡಿದೆ.
ಲಿಂಗ ತಾರತಮ್ಯವಿಲ್ಲದ ಕ್ರೀಡೆ
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲ. ಭಾರತದಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳಾ ಆಟಗಾರ್ತಿಯರೂ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದು ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುವಂತೆ ಮಾಡಿದೆ. ಅಲ್ಲದೆ ಮಿಕ್ಸೆಡ್ ಡಬಲ್ಸ್ (ಮಹಿಳೆ ಮತ್ತು ಪುರುಷ ಜೊತೆಯಾಗಿ ಆಡುವುದು) ಪಂದ್ಯಗಳು ಈ ಕ್ರೀಡೆಗೆ ಎಲ್ಲ ವರ್ಗದ ಜನರನ್ನು ಆಕರ್ಷಿಸುತ್ತವೆ.

ಹವಾಮಾನದ ಅನುಕೂಲತೆ
ಭಾರತದಲ್ಲಿ ಬೇಸಿಗೆ, ಮಳೆ ಅಥವಾ ಚಳಿಗಾಲದ ತೀವ್ರತೆ ಹೆಚ್ಚಿರುತ್ತದೆ. ಕ್ರಿಕೆಟ್ ಅಥವಾ ಫುಟ್‌ಬಾಲ್‌ನಂತಹ ಹೊರಾಂಗಣ (Outdoor) ಕ್ರೀಡೆಗಳು ಮಳೆಗೆ ರದ್ದಾಗುತ್ತವೆ ಅಥವಾ ಬಿಸಿಲಿನಲ್ಲಿ ಆಡುವುದು ಕಷ್ಟವಾಗುತ್ತದೆ. ಆದರೆ ಬ್ಯಾಡ್ಮಿಂಟನ್ ಹೆಚ್ಚಾಗಿ ಒಳಾಂಗಣ (Indoor Court) ಕ್ರೀಡೆಯಾಗಿರುವುದರಿಂದ ವರ್ಷದ 365 ದಿನಗಳೂ ಯಾವುದೇ ಅಡೆತಡೆಯಿಲ್ಲದೆ ಆಡಬಹುದು.
ಅಪ್ಲಿಕೇಶನ್‌ಗಳು
ನೀವು ಒಬ್ಬರೇ ಇದ್ದರೂ ಬ್ಯಾಡ್ಮಿಂಟನ್ ಆಡಬಹುದು. ಕ್ರೀಡೆಗಾಗಿಯೇ ಪ್ಲೇಯೋ (Playo) ನಂತಹ ಅಪ್ಲಿಕೇಶನ್‌ಗಳಿವೆ. ಇಲ್ಲಿ ಕೋರ್ಟ್ ಬುಕ್ ಮಾಡಿ ಆಟ ಆಡಲು ಉಳಿದ ಪ್ಲೇಯರ್‌ಗಳನ್ನು ಆಹ್ವಾನಿಸಬಹುದು. ಇಲ್ಲಿ ಪ್ಲೇಯರ್ ಆಟದ ಶೈಲಿಗೆ ಅನುಗುಣವಾಗಿ ಅಂಕ ನೀಡಬಹುದು. ಬಿಗಿನರ್, ಅಮೆಚೂರ್, ಇಂಟರ್‌ಮಿಡಿಯೆಟ್, ಅಡ್ವಾನ್ಸ್ಡ್, ಪ್ರೊಫೆಶನಲ್ ರೇಟಿಂಗ್ ನೀಡಬಹುದು. ಈ ರೇಟಿಂಗ್ ಆಧಾರದ ಮೇಲೆ ಆ ಆಟಗಾರರ ಜೊತೆಗೆ ಆಡಬಹುದು.
ಉಚಿತ ಮಾರ್ಗದರ್ಶನ
ಕೋಚ್ ಸಿಗದೇ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಡ್ಮಿಂಟನ್ ಆಟಗಾರರು ವಿಡಿಯೋ ಮಾಡಿ ಯಾವ ರೀತಿ ಆಡಬೇಕೆಂದು ವಿವರಿಸುತ್ತಾರೆ. ಇದರಿಂದಾಗಿ ಆಟಗಾರರು ಇದ್ದ ಸ್ಥಳದಲ್ಲೇ ಉಚಿತವಾಗಿ ಮಾರ್ಗದರ್ಶನ ಪಡೆಯಬಹುದಾಗಿದೆ.

ಮಕ್ಕಳಿಗೆ ಅತ್ಯುತ್ತಮ ಕ್ರೀಡೆ
ಮಕ್ಕಳಿಗೆ ಕ್ರಿಕೆಟ್‌ನಂತೆ ಅತಿ ಹೆಚ್ಚು ನಿಯಮಗಳು ಅಥವಾ ಫುಟ್‌ಬಾಲ್‌ನಂತೆ ಅತಿಯಾದ ಓಟದ ತಂತ್ರಗಳು ಬ್ಯಾಡ್ಮಿಂಟನ್‌ನಲ್ಲಿ ಆರಂಭದಲ್ಲೇ ಬೇಕಾಗಿಲ್ಲ. ಶಟಲ್‌ಕಾಕ್ ಅನ್ನು ರಾಕೆಟ್‌ನಿಂದ ಹೊಡೆಯುವುದು ಮಕ್ಕಳಿಗೆ ಒಂದು ಮೋಜಿನ ಆಟದಂತೆ ಕಾಣುತ್ತದೆ. ತಕ್ಷಣವೇ ಆಟದಲ್ಲಿ ತೊಡಗಿಸಿಕೊಳ್ಳಲು ಇದು ಸುಲಭವಾದ್ದರಿಂದ ಮಕ್ಕಳು ಇದನ್ನು ಇಷ್ಟಪಡುತ್ತಾರೆ.
ವೇಗವಾಗಿ ಬರುವ ಶಟಲ್‌ಕಾಕ್ ಅನ್ನು ನೋಡಿ ತಕ್ಷಣ ಪ್ರತಿಕ್ರಿಯಿಸುವುದರಿಂದ ಮಕ್ಕಳ ಏಕಾಗ್ರತೆ ಮತ್ತು ಚುರುಕುತನ ಹೆಚ್ಚುತ್ತದೆ. ಆಟದಲ್ಲಿ ಜಂಪ್ ಮಾಡುವುದು, ಸ್ಟ್ರೆಚ್ ಮಾಡುವುದರಿಂದ ಮಕ್ಕಳ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ ಹಾಗೂ ಎತ್ತರ ಬೆಳೆಯಲು ಸಹಕಾರಿಯಾಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಆಟಗಳಿಗೆ ಅಂಟಿಕೊಳ್ಳುತ್ತಿರುವುದನ್ನು ತಪ್ಪಿಸಲು ಪೋಷಕರು ಬ್ಯಾಡ್ಮಿಂಟನ್ ಅನ್ನು ಅತ್ಯುತ್ತಮ ಪರ್ಯಾಯವಾಗಿ ನೋಡುತ್ತಿದ್ದಾರೆ.
ಫುಟ್‌ಬಾಲ್, ಕರಾಟೆ, ಕಬಡ್ಡಿ ಅಥವಾ ಹಾಕಿಯಂತಹ ಕ್ರೀಡೆಗಳಿಗೆ ಹೋಲಿಸಿದರೆ ಬ್ಯಾಡ್ಮಿಂಟನ್‌ನಲ್ಲಿ ಆಟಗಾರರ ನಡುವೆ ನೇರ ದೈಹಿಕ ಸಂಪರ್ಕ (Physical Contact) ಇರುವುದಿಲ್ಲ. ನೆಟ್‌ನ ಎರಡೂ ಬದಿಯಲ್ಲಿ ಆಡುವುದರಿಂದ ಮಕ್ಕಳಿಗೆ ಪೆಟ್ಟಾಗುವ ಅಥವಾ ಗಾಯಗೊಳ್ಳುವ (Injuries) ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಪೋಷಕರು ಸಣ್ಣ ವಯಸ್ಸಿನ ಮಕ್ಕಳನ್ನು ಧೈರ್ಯವಾಗಿ ಈ ಕ್ರೀಡೆಗೆ ಕಳುಹಿಸುತ್ತಾರೆ.
ಇತ್ತೀಚಿನ ಬಹುತೇಕ ಅಪಾರ್ಟ್‌ಮೆಂಟ್‌ಗಳು ಮತ್ತು ಆಧುನಿಕ ಶಾಲೆಗಳಲ್ಲಿ ಒಳಾಂಗಣ ಅಥವಾ ಹೊರಾಂಗಣ ಬ್ಯಾಡ್ಮಿಂಟನ್ ಕೋರ್ಟ್‌ಗಳು ಸಾಮಾನ್ಯವಾಗಿ ಇರುತ್ತವೆ. ಸಂಜೆ ಜತೆಯಾಗಿ ಆಡಲು ಸಿಗುವ ಸುಲಭ ಅವಕಾಶ ಮತ್ತು ಸ್ನೇಹಿತರ ಒಡನಾಟ ಮಕ್ಕಳನ್ನು ಈ ಆಟದತ್ತ ಸೆಳೆಯುತ್ತದೆ.
ಅಂತಿಮವಾಗಿ ಬ್ಯಾಡ್ಮಿಂಟನ್ ಭಾರತದಲ್ಲಿ ಕೇವಲ ಅಂಕಗಳ ಆಟವಾಗಿ ಉಳಿದಿಲ್ಲ. ಅದೊಂದು ಹೊಸ ತಲೆಮಾರಿನ ಕನಸು ಮತ್ತು ಫಿಟ್‌ನೆಸ್ ಸಂಸ್ಕೃತಿಯ ಭಾಗವಾಗಿದೆ. ಬೀದಿಯ ನೆರಳಿನಿಂದ ವಿಶ್ವಮಟ್ಟದ ಪೀಠದವರೆಗಿನ ಈ ಪಯಣ, ಭಾರತೀಯ ಕ್ರೀಡಾಲೋಕ ಕೇವಲ ಒಂದೇ ಕ್ರೀಡೆಗೆ ಸೀಮಿತವಾಗಿಲ್ಲ ಎಂಬುದನ್ನು ಸಾರುತ್ತಿದೆ. ಸರಿಯಾದ ಪ್ರೋತ್ಸಾಹ, ಸುಸಜ್ಜಿತ ಮೂಲಸೌಕರ್ಯ ಮತ್ತು ಮಕ್ಕಳಲ್ಲಿನ ಆಸಕ್ತಿ ಹೀಗೆಯೇ ಮುಂದುವರಿದರೆ, ಭಾರತವು ಜಾಗತಿಕ ಬ್ಯಾಡ್ಮಿಂಟನ್ ಸಾಮ್ರಾಜ್ಯವನ್ನು ಆಳುವ ದಿನಗಳು ದೂರವಿಲ್ಲ. ಬ್ಯಾಡ್ಮಿಂಟನ್ ಕೋರ್ಟ್‌ಗಳಲ್ಲಿ ಚಿಗುರುತ್ತಿರುವ ಈ ಉತ್ಸಾಹವು ಮುಂದಿನ ದಿನಗಳಲ್ಲಿ ಭಾರತಕ್ಕೆ ಇನ್ನಷ್ಟು ಒಲಿಂಪಿಕ್ ಪದಕಗಳನ್ನು, ಆರೋಗ್ಯವಂತ ಪೀಳಿಗೆಯನ್ನು ತಂದುಕೊಡುವುದರಲ್ಲಿ ಸಂಶಯವಿಲ್ಲ.
