ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರದ ಶಿಥಿಲಗೊಂಡಿದ್ದ ಮೇಲ್ಚಾವಣಿಯ ಸಿಮೆಂಟ್ ಪ್ಲಾಸ್ಟಿಂಗ್ ಕುಸಿದು (Angawadi Roof Collapse) ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಶಿಥಿಲಗೊಂಡಿದ್ದರೂ ಅದರ ಕೆಳಗೇ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಏಕಾಏಕಿ ಮೇಲ್ಚಾವಣಿಯ ಸಿಮೆಂಟ್ ಪ್ಲಾಸ್ಟಿಂಗ್ ಕುಸಿದ ಪರಿಣಾಮ ಜೀವಿಕ, ರಿತಿಕ್ಷಾ ಸೇರಿದಂತೆ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಕರ್ಮಕಾಂಡ – ಡ್ರೆಸ್ಸಿಂಗ್ ರೂಂ, ಲೇಡಿಸ್ ಟಾಯ್ಲೆಟ್‌ನಲ್ಲಿ ಸಿಸಿಟಿವಿ ಪತ್ತೆ

ಗಾಯಗೊಂಡ ಮಕ್ಕಳನ್ನು ತಕ್ಷಣವೇ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸ್ಥಿತಿ ಕಂಡು ಆಸ್ಪತ್ರೆಯಲ್ಲಿ ಪೋಷಕರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: 4 ಲಕ್ಷ ಮೌಲ್ಯದ ಮಾಂಗಲ್ಯ ಸರ ಕದ್ದಿದ್ದ ಇರಾನಿ ಗ್ಯಾಂಗ್‌ನ ಇಬ್ಬರು ಅರೆಸ್ಟ್
ಘಟನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳನ್ನ ಕೂರಿಸಿರುವ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿತ್ತು ಎಂಬ ಆಕ್ರೋಶ ವ್ಯಕ್ತವಾಗಿದೆ.

ಅಧಿಕಾರಿಗಳ ಭೇಟಿ, ಪರಿಶೀಲನೆ
ಘಟನೆ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ ಅವರು ದೊಡ್ಡಬೊಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರವನ್ನ ಪರಿಶೀಲಿಸಿದರು. ಗಾಯಗೊಂಡ ಮಕ್ಕಳ ಮನೆಗಳಿಗೂ ಭೇಟಿ ನೀಡಿ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ಸಿಡಿಪಿಒ ಮಹೇಶ್ ಅವರು ಗಾಯಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಹಿಪ್ಪರಗಿ ಕಾರು ಸ್ಫೋಟ ಪ್ರಕರಣ| ಬಯಲಾಯ್ತು ಕೊಲೆಯ ಮಹಾಸಂಚು; ನಾಲ್ವರು ಆರೋಪಿಗಳ ಬಂಧನ

