ಮಡಿಕೇರಿ: ಕೊಡಗು ಜಿಲ್ಲೆಯ ವೀರಾಜಪೇಟೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಣೆ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಸುಮಾರು 28 ಲಕ್ಷ ರೂ. ಮೌಲ್ಯದ 45 ಬೀಟೆ ಮರದ ದಿಮ್ಮಿಗಳು ಹಾಗೂ ಸಾಗಣೆಗೆ ಬಳಸಿದ್ದ ಲಾರಿಯನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಕೇರಳದ ಮಲ್ಲಪುರಂ ಮೂಲದ ಲಾರಿ ಮಾಲೀಕ ಹಾಗೂ ಚಾಲಕ ಅಬ್ದುಲ್ ಶುಕೂರ್‌ನನ್ನು ಬಂಧಿಸಲಾಗಿದೆ. ಲಾರಿಯಲ್ಲಿದ್ದ ಸುಮಾರು 28 ಲಕ್ಷ ರೂ. ಬೆಲೆ ಬಾಳುವ 45 ಬೀಟೆ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಗಿನಿಂದ ಕಾಫಿ ಹಾಗೂ ಮರದ ಹೊಟ್ಟು ತುಂಬಿದ ಚೀಲಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನು ಅಡಗಿಸಿ ಸಾಗಣೆ ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಹುಣಸೂರು-ಹೆಚ್.ಡಿ.ಕೋಟೆ ಮುಖ್ಯರಸ್ತೆಯ ಆಜಾದ್ ನಗರ ಪೆಟ್ರೋಲ್ ಬಂಕ್ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಲಾರಿಯೊಳಗೆ ಅಡಗಿಸಿಟ್ಟಿದ್ದ ಬೀಟೆ ಮರದ ದಿಮ್ಮಿಗಳು ಪತ್ತೆಯಾಗಿವೆ.
ಅರಣ್ಯ ಇಲಾಖೆ ಲಾರಿ, ಮರದ ದಿಮ್ಮಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದೆ. ಪ್ರಾಥಮಿಕ ತನಿಖೆ ಪ್ರಕಾರ, ಕೊಡಗಿನಿಂದ ಮರಗಳನ್ನು ರಹಸ್ಯವಾಗಿ ಸಂಗ್ರಹಿಸಿ ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಅಧಿಕಾರಿಗಳು, ಇದು ಸಂಘಟಿತ ಜಾಲದ ಕೆಲಸವಾಗಿದ್ದು, ಪ್ರಕರಣದ ಪ್ರಮುಖ ಆರೋಪಿಗಳು ಹಾಗೂ ಮಾಸ್ಟರ್ ಮೈಂಡ್ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅರಣ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
