ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಡೆಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ನಡೆದಿದೆ.
ಹೊನ್ನಾವರದ ಚಂದ್ರಕಾಂತ ಖಾರ್ವಿ (38) ಸಮುದ್ರ ಪಾಲಾದ ಮೀನುಗಾರನಾಗಿದ್ದಾನೆ. ಇಂದು ಬೆಳಗ್ಗೆ ಮೀನುಗಾರಿಕೆಗೆ ಬೋಟ್ ತೆಗೆದುಕೊಂಡು ಸಮುದ್ರಕ್ಕಿಳಿದಿದ್ದ ಇಬ್ಬರು ಮೀನುಗಾರರು ಮತ್ಸ್ಯ ಬೇಟೆಯಲ್ಲಿ ತೊಡಗಿದ್ದಾಗ ಏಕಾಏಕಿ ಸಮುದ್ರದ ಬೃಹತ್ ಅಲೆ ಬೋಟ್‌ಗೆ ಅಪ್ಪಳಿಸಿದೆ. ಈ ವೇಳೆ ಬೋಟ್‌ನಲ್ಲಿದ್ದ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ. ಈ ವೇಳೆ ಚಂದ್ರಕಾಂತ ಖಾರ್ವಿ ಸಮುದ್ರದಲ್ಲಿ ಮುಳಗಿ ಸಾವು ಕಂಡರೆ, ಅದೃಷ್ಟವಶಾತ್ ಇನ್ನೋರ್ವ ಮೀನುಗಾರ ಕೇಶವ ಖಾರ್ವಿ ಪ್ರಾಣಾಪಾಯದಿಂದ ಪಾರಾಗಿದ್ದು, ಈಜಿ ದಡ ಸೇರಿದ್ದಾರೆ.
ಘಟನೆ ಸಂಬಂಧ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

