ಹೊಸೈನ್: ಫಿಫಾ ವಿಶ್ವಕಪ್ 2026ರ (FIFA World Cup 2026) ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಟೂರ್ನಿಯು ಈಗಾಗಲೇ ಕೆಲವು ರೋಮಾಂಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಬಲಿಷ್ಠ ಬ್ರೆಜಿಲ್ ತಂಡದ ವಿರುದ್ಧ ಮೊರಾಕೊ 1-1 ಗೋಲುಗಳ ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದರಿಂದ ಹಿಡಿದು, ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ವಿಶ್ವಕಪ್ ವೃತ್ತಿಜೀವನದ ಮೊದಲ ಹ್ಯಾಟ್ರಿಕ್ ಗೋಲು ಸಾಧನೆ ವರೆಗೆ ಈ ಬಾರಿಯ ವಿಶ್ವಕಪ್ ಫುಟ್‌ಬಾಲ್ ಪ್ರಿಯರಿಗೆ ಭರಪೂರ ಮನರಂಜನೆ ನೀಡಿದೆ. ಫ್ರಾನ್ಸ್, ಇಂಗ್ಲೆಂಡ್ ಮತ್ತು ಜರ್ಮನಿಯಂತಹ ತಂಡಗಳು ಭರ್ಜರಿ ಜಯ ದಾಖಲಿಸಿವೆ. ಇತ್ತ ಸ್ಪೇನ್, ನೆದರ್ಲ್ಯಾಂಡ್ಸ್ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರ ಪೋರ್ಚುಗಲ್ ತಂಡಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿವೆ.
ಟಾಪ್ 10ರಲ್ಲಿ ಸ್ಥಾನ ಪಡೆದ ತಂಡಗಳ್ಯಾವುವು?
ಫ್ರಾನ್ಸ್
ವಿಶ್ವಕಪ್ ಗೆಲ್ಲುವ ತವಕದೊಂದಿಗೆ ಕಣಕ್ಕಿಳಿದ ಫ್ರಾನ್ಸ್, ಸೆನೆಗಲ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತು. ಪಂದ್ಯದ ಮೊದಲಾರ್ಧದಲ್ಲಿ ಸೆನೆಗಲ್‌ನ ಬಲಿಷ್ಠ ತಂಡದ ಮುಂದೆ ಪ್ರಾನ್ಸ್ ಸ್ವಲ್ಪ ಹಿನ್ನಡೆ ಅನುಭವಿಸಿತು. ಆದರೆ, ಮೈಕೆಲ್ ಒಲೈಸ್ ಅವರ ಎರಡು ಅದ್ಭುತ ಅಸಿಸ್ಟ್‌ಗಳು ಪಂದ್ಯದ ಚಿತ್ರಣ ಬದಲಿಸಿದವು. ಮೊದಲ ಗೋಲು ಗಳಿಸಿ ಖಾತೆ ತೆರೆದ ಕಿಲಿಯನ್ ಎಂಬಾಪೆ, ಆನಂತರ ಬ್ರಾಡ್ಲಿ ಬಾರ್ಕೋಲಾ ಅವರ ಚುರುಕಿನ ಗೋಲಿನ ಬೆಂಬಲದೊಂದಿಗೆ ಫ್ರಾನ್ಸ್ ಪ್ರಾಬಲ್ಯವನ್ನು ಸಾಬೀತುಪಡಿಸಿದರು. ಇದನ್ನೂ ಓದಿ: ಮೆಸ್ಸಿ ಹ್ಯಾಟ್ರಿಕ್ ಗೋಲು – ವಿಶ್ವಕಪ್‌ನಲ್ಲಿ ಮಿರೋಸ್ಲಾವ್ ಕ್ಲೋಸ್ ದಾಖಲೆ ಸರಿಗಟ್ಟಿದ ಫುಟ್ಬಾಲ್ ಲೆಜೆಂಡ್
ಅರ್ಜೆಂಟೀನಾ
ಅರ್ಜೆಂಟೀನಾ ಮತ್ತು ಅಲ್ಜೀರಿಯಾ ನಡುವಿನ ಪಂದ್ಯ ಸಂಪೂರ್ಣವಾಗಿ ಲಿಯೋನೆಲ್ ಮೆಸ್ಸಿ ಮಯವಾಗಿತ್ತು. ಅಲ್ಜೀರಿಯಾವನ್ನು ಅಸಹಾಯಕವಾಗಿಸಿದ ಮೆಸ್ಸಿ, 3-0 ಅಂತರದ ಕ್ಲಿನಿಕಲ್ ಗೆಲುವಿನಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಅರ್ಜೆಂಟೀನಾದ ರಕ್ಷಣಾ ಆಟ ಹಾಗೂ ಆಟಗಾರರ ನಡುವಿನ ಅತ್ಯುತ್ತಮ ಹೊಂದಾಣಿಕೆ ಮೆಸ್ಸಿ ಮುಕ್ತವಾಗಿ ಗೋಲು ಗಳಿಸಲು ನೆರವಾಯಿತು.

ಇಂಗ್ಲೆಂಡ್
ಇಂಗ್ಲೆಂಡ್ ತಂಡದ ಆಯ್ಕೆಯ ಬಗ್ಗೆ ಟೂರ್ನಿಗೂ ಮುನ್ನ ಸಾಕಷ್ಟು ಚರ್ಚೆಗಳಾಗಿದ್ದವು. ಆದರೆ ಕ್ರೊಯೇಷಿಯಾ ವಿರುದ್ಧ 4-2 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ತಂಡ ಎಲ್ಲಾ ಟೀಕೆಗಳಿಗೂ ಉತ್ತರಿಸಿದೆ. ನಾಯಕ ಹ್ಯಾರಿ ಕೇನ್ ಎರಡು ಗೋಲು ಗಳಿಸಿದರೆ, ಜೂಡ್ ಬೆಲ್ಲಿಂಗ್‌ಹ್ಯಾಮ್ ಮತ್ತು ಮಾರ್ಕಸ್ ರಾಶ್‌ಫೋರ್ಡ್ ಅವರ ಪ್ರೇರಣಾದಾಯಕ ಆಟವು ಈ ಬಾರಿ ಕಪ್ ನಮ್ಮದೇ ಎನ್ನುವ ಭರವಸೆಯನ್ನು ಇಂಗ್ಲೆಂಡ್ ಅಭಿಮಾನಿಗಳಲ್ಲಿ ಮೂಡಿಸಿದೆ.
ಜರ್ಮನಿ
ಜರ್ಮನಿ ತಂಡಕ್ಕೆ ಕಳೆದ 2018 ಮತ್ತು 2022ರ ವಿಶ್ವಕಪ್‌ಗಳಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ಆಘಾತ ಅನುಭವಿಸಿತ್ತು. ಆದರೆ ಈ ಬಾರಿ ಕುರಾಕೊ ವಿರುದ್ಧ 7-1 ಗೋಲುಗಳ ಬೃಹತ್ ಜಯ ದಾಖಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕೈ ಹಾವರ್ಟ್ಜ್ ಗಳಿಸಿದ ಎರಡು ಗೋಲುಗಳು ತಂಡದ ಮುಂಚೂಣಿ ಸ್ಟ್ರೈಕರ್ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಯುಎಸ್‌ಎ
ಅಮೆರಿಕ (ಯುಎಸ್‌ಎ) ತಂಡ ಪರಾಗ್ವೆ ವಿರುದ್ಧ 4-1 ಗೋಲುಗಳ ಅದ್ಭುತ ಜಯ ಸಾಧಿಸಿ ಎಲ್ಲರ ಗಮನ ಸೆಳೆದಿದೆ. ಫೋಲಾರಿನ್ ಬಾಲೋಗುನ್ ಅವರ ಡಬಲ್ ಸ್ಟ್ರೈಕ್ ಹಾಗೂ ಕೊನೆಯಲ್ಲಿ ಗಿಯೋವಾನಿ ರೇನಾ ಗಳಿಸಿದ ಗೋಲಿನ ನೆರವಿನಿಂದ ಅಮೆರಿಕ ಮುಂದಿನ ಹಂತಕ್ಕೇರುವ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: Photo Viral | ಫುಟ್‌ಬಾಲ್ ಪಂದ್ಯ ನೋಡಲು ಒಟ್ಟಿಗೆ ಬಂದ ಮಾಜಿ ನೀಲಿ ತಾರೆ ಮಿಯಾ ಖಲೀಫಾ – ಲಾನಾ
ನಾರ್ವೆ
ಬರೋಬ್ಬರಿ 28 ವರ್ಷಗಳ ನಂತರ ವಿಶ್ವಕಪ್ ಆಡುತ್ತಿರುವ ನಾರ್ವೆ ತಂಡ, ಇರಾಕ್ ವಿರುದ್ಧ 4-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ. ಸ್ಟಾರ್ ಆಟಗಾರ ಎರ್ಲಿಂಗ್ ಹಾಲೆಂಡ್ ಎರಡು ಗೋಲು ಗಳಿಸಿದರೆ, ಲಿಯೋ ಒಸ್ಟಿಗಾರ್ಡ್ ಮತ್ತೊಂದು ಸೂಪರ್ ಗೋಲು ಗಳಿಸಿದ್ದಾರೆ.
ಸ್ವೀಡನ್
ಈ ತಂಡದ ತಾರಾ ಜೋಡಿ ಅಲೆಕ್ಸಾಂಡರ್ ಇಸಾಕ್ ಮತ್ತು ವಿಕ್ಟರ್ ಗ್ಯೋಕೆರೆಸ್ ಟುನೀಶಿಯಾ ವಿರುದ್ಧದ 5-1 ಗೆಲುವಿನಲ್ಲಿ ಯಾಸಿನ್ ಅಯಾರಿ ಎರಡು ಗೋಲು ಗಳಿಸಿ ಮಿಂಚಿದರು. ಈ ದೊಡ್ಡ ಗೆಲುವಿನ ಮೂಲಕ ಸ್ವೀಡನ್ ಬಲಿಷ್ಠ ತಂಡಗಳಿಗೆ ಶಾಕ್ ಕೊಡುವ ಸಾಮರ್ಥ್ಯ ಹೊಂದಿರುವುದನ್ನು ಸಾಬೀತುಪಡಿಸಿದೆ.
ಮೊರಾಕೊ
ಟೂರ್ನಿಯಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದು ಮೊರಾಕೊ ತಂಡ. ಬ್ರೆಜಿಲ್ ವಿರುದ್ಧ 1-1 ಡ್ರಾ ಸಾಧಿಸಿದ ಮೊರಾಕೊದ ಯುವ ಆಟಗಾರ ಅಯ್ಯೂಬ್ ಬೌಅಡ್ಡಿ ಮಿಡ್‌ಫೀಲ್ಡ್‌ನಲ್ಲಿ ಬ್ರೆಜಿಲ್ ಆಟಗಾರರನ್ನು ಕಟ್ಟಿಹಾಕಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇಸ್ಮಾಯಿಲ್ ಸೈಬಾರಿ ಮೊರಾಕೊಗೆ ಆರಂಭಿಕ ಮುನ್ನಡೆ ತಂದುಕೊಟ್ಟರೆ, ಬ್ರೆಜಿಲ್ ಪರ ವಿನೀಶಿಯಸ್ ಜೂನಿಯರ್ ಅದ್ಭುತ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು.
ಜಪಾನ್
ಟೂರ್ನಿಯ ಮತ್ತೊಂದು ಅತ್ಯಂತ ರೋಚಕ ಪಂದ್ಯದಲ್ಲಿ ಜಪಾನ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 2-2 ಗೋಲುಗಳ ರೋಮಾಂಚಕ ಡ್ರಾ ಸಾಧಿಸಿತು. ಪಂದ್ಯ ಗೆಲ್ಲದಿದ್ದರೂ ಜಪಾನ್ ಆಟಗಾರರು ತೋರಿದ ಪ್ರದರ್ಶನ ಹಾಗೂ ಕೊನೆಯ ನಿಮಿಷದಲ್ಲಿ ಡೈಚಿ ಕಮಾಡಾ ಬಾರಿಸಿದ ಹೆಡರ್ ಗೋಲು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಅಗುತ್ತಿದೆ.
ಆಸ್ಟ್ರೇಲಿಯಾ
ಟರ್ಕಿ ವಿರುದ್ಧ ಆಸ್ಟ್ರೇಲಿಯಾ 2-0 ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟ ಹಾಗೂ ಮಿಡ್‌ಫೀಲ್ಡ್ ಪ್ರಾಬಲ್ಯದ ಮುಂದೆ ಟರ್ಕಿ ಮಣಿಯಿತು.
