ಚಂಡೀಗಢ: ರಸಗೊಬ್ಬರದ ಕೊರತೆ, ಇಂಧನ ಬೆಲೆ ಹೆಚ್ಚಳ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ಅಖಿಲ ಭಾರತ ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಇಂದಿನಿಂದ (ಜೂನ್ 08) ದೇಶದಾದ್ಯಂತ ಹಲವಡೆ ಪ್ರತಿಭಟನೆ ಆರಂಭವಾಗಿದೆ.
ಪಂಜಾಬ್(Punjab)ನ 17 ಜಿಲ್ಲೆಗಳು ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಪ್ರತಿಭಟನೆಗೆ ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದ ರೈತರು (Farmers of Bihar)ಕೂಡ ಕೈಜೋಡಿಸುತ್ತಿದ್ದಾರೆ.
ಹೋರಾಟಕ್ಕೆ ಕಾರಣವೇನು?
ರಸಗೊಬ್ಬರದ ಕೊರತೆಯ ಸಮಸ್ಯೆ ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಡೀ ದೇಶ ಈ ಸಮಸ್ಯೆ ಎದುರಿಸುತ್ತಿದೆ. ಜಾಗತಿಕ ಪೂರೈಕೆಯಲ್ಲಿನ ಅಡಚಣೆಗಳು ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳಿಂದಾಗಿ ರಸಗೊಬ್ಬರ ಸಿಗುತ್ತಿಲ್ಲ. ಇದರಿಂದಾಗಿ ರೈತರಿಗೆ ಬಿತ್ತನೆ ಸಮಯದಲ್ಲೇ ಅಗತ್ಯ ಕೃಷಿಪರಿಕರಗಳ ಕೊರತೆಯುಂಟಾಗಿದೆ ಎಂದು ಕಿಸಾನ್ ನಾಯಕ ಸರ್ವನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ. ಇದನ್ನೂ ಓದಿ: Kottiyoor | ಮಹಿಳೆಯರ ಮೇಲೆ ಕಾಲಿಂದ ನೀರು ಎರಚುತ್ತಾರೆ, ಗೂಂಡಾಗಿರಿ ಮಾಡ್ತಿದ್ದಾರೆ: ಕನ್ನಡಿಗರ ಆಕ್ರೋಶ
ಇದರ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿದಿದ್ದರೂ, ಅದರ ಲಾಭವನ್ನು ರೈತರಿಗೆ ನೀಡುತ್ತಿಲ್ಲ. ಇಂಧನ ದರ ಹೆಚ್ಚಿಸಿರುವುದರಿಂದ ಕೃಷಿಕರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆ ನೀರಾವರಿ, ಸಾರಿಗೆ ಮತ್ತು ಕೃಷಿ ಯಂತ್ರೋಪಕರಣಗಳ ಬಳಕೆಯಂತಹ ದೈನಂದಿನ ಕೃಷಿ ಚಟುವಟಿಕೆಗಳ ಮೇಲೆ ಆರ್ಥಿಕ ಬರೆ ಎಳೆದಿದೆ. ಜೊತೆಗೆ ಭಾರತ್‌ಮಾಲಾ ಮತ್ತು ಇತರ ಸರ್ಕಾರಿ ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ರೈತರ ಸೂಕ್ತ ಒಪ್ಪಿಗೆಯಿಲ್ಲದೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಈ ಬೃಹತ್ ಪ್ರತಿಭಟನೆಯಲ್ಲಿ ದೇಶದ ಎಲ್ಲಾ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತ ಮುಖಂಡರು ಕರೆ ನೀಡಿದ್ದಾರೆ. ಸರ್ಕಾರಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊಟ್ಟಿಯೂರು ದೇವಸ್ಥಾನದಲ್ಲಿ ಕರ್ನಾಟಕ ಭಕ್ತರ ಮೇಲೆ ದುರ್ವರ್ತನೆ – ನೂಕುನುಗ್ಗಲು, ಭಾರೀ ಅವ್ಯವಸ್ಥೆ
