ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ (Fertilizer) ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಯೂರಿಯಾದಂತಹ ರಸಗೊಬ್ಬರಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ಮತ್ತು ವೈಜ್ಞಾನಿಕ ಬಳಕೆಯನ್ನು ಉತ್ತೇಜಿಸಲು ರೈತರಿಗೆ (Farmers) ಫಾರ್ಮರ್ಸ್ ಐಡಿ (FID) ಹೊಂದುವುದನ್ನು ಕಡ್ಡಾಯಗೊಳಿಸಿದೆ.
ಈ ವರ್ಷದಿಂದ ಯೂರಿಯಾ, ಡಿಎಪಿ ಸೇರಿದಂತೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ ಎಫ್‌ಐಡಿ ಕಡ್ಡಾಯ. ಪ್ರತಿಯೊಬ್ಬ ರೈತರೂ ಎಫ್‌ಐಡಿಯನ್ನು ಮಾಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ 20 ದಿನಗಳ ಹಿಂದೆ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ
ಏನು ಕೊರತೆ?
ಗೊಬ್ಬರ ತಯಾರಿಕೆಗೆ ಪ್ರಮುಖವಾಗಿ ನೈಸರ್ಗಿಕ ಅನಿಲ ಬೇಕಾಗುತ್ತದೆ. ಇದರೊಂದಿಗೆ ಇನ್ನುಳಿದ ಕಚ್ಚಾವಸ್ತುಗಳು ಬರುವುದು ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ. ಅದರಲ್ಲೂ ಬಹುಪಾಲು ಕಚ್ಚಾ ವಸ್ತು ಹೋರ್ಮುಜ್ ಜಲಸಂಧಿ ಮಾರ್ಗದ ಮೂಲಕವೇ ಬರುತ್ತದೆ. ಸದ್ಯ ಹೋರ್ಮುಜ್ ಜಲಸಂಧಿ ಬಹುತೇಕ ಬಂದಾಗಿದ್ದು, ಕಚ್ಚಾ ವಸ್ತುಗಳು ಬರುತ್ತಿಲ್ಲ. ಸದ್ಯಕ್ಕೆ ಬೇಕಾಗುವಷ್ಟು ಕಚ್ಚಾ ವಸ್ತುಗಳ ದಾಸ್ತಾನಿದೆ ಎಂದು ಮೂಲಗಳು ತಿಳಿಸಿವೆ. ಆದರೂ ಸಹ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಸಗೊಬ್ಬರ ಖರೀದಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಎಫ್‌ಐಡಿ ಕಡ್ಡಾಯಗೊಳಿಸಿ ಕೃಷಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಕುಡಿವ ನೀರಿಗಾಗಿ ಸಚಿವ ತಂಗಡಗಿ ಕಾರಿಗೆ ಗ್ರಾಮಸ್ಥರ ಮುತ್ತಿಗೆ
ಯೂರಿಯಾ ಬಳಕೆಗೆ ಕಡಿವಾಣ:
ರೈತರು ಯೂರಿಯಾ ಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಒಂದು ಎಕರೆಗೆ 1ರಿಂದ 2 ಚೀಲವಾದರೆ ಸಾಕು. ಆದರೆ, ನಾಲ್ಕೈದು ಚೀಲದವರೆಗೂ ಬಳಕೆ ಮಾಡುತ್ತಿದ್ದಾರೆ. ಕೆಲ ಕೈಗಾರಿಕೆಗೂ ಅನಧಿಕೃತವಾಗಿ ಯೂರಿಯಾ ಬಳಕೆಯಾಗುತ್ತಿದೆ. ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಎಫ್‌ಐಡಿ ಕಡ್ಡಾಯಗೊಳಿಸಲಾಗಿದೆ. ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಎನ್ಐಸಿಯು ಘಟಕ ಸ್ಥಾಪನೆಗೆ ಕೇಂದ್ರದಿಂದ 5 ಕೋಟಿ ಅನುದಾನ: ಬಿವೈಆರ್
ಎಫ್‌ಐಡಿಯಲ್ಲಿ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ. ಅಷ್ಟು ಜಮೀನಿಗೆ ವೈಜ್ಞಾನಿಕವಾಗಿ ಎಷ್ಟು ಗೊಬ್ಬರ ಬಳಸಿದರೆ ಉತ್ತಮ ಎಂಬುದನ್ನು ಲೆಕ್ಕ ಹಾಕಿ ಅಷ್ಟೇ ಪ್ರಮಾಣದ ರಸಗೊಬ್ಬರ ವಿತರಿಸಲು ಕೃಷಿ ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: ಡಿಜಿಟಲ್ ಹೆದ್ದಾರಿಯನ್ನೇ ಕತ್ತರಿಸುತ್ತೇವೆ – ವಿಶ್ವಕ್ಕೆ ಇರಾನ್ ಬೆದರಿಕೆ | ಭಾರತಕ್ಕೆ ಏನು?
ರಾಜ್ಯಕ್ಕೆ ಈ ವರ್ಷ ಯೂರಿಯಾ ಸೇರಿದಂತೆ 30 ಲಕ್ಷ ಟನ್ ವಿವಿಧ ರಸಗೊಬ್ಬರ ಹಂಚಿಕೆಯಾಗಿದೆ. ಅದರಲ್ಲಿ ಶೇ.35-40ರಷ್ಟು (10-12 ಲಕ್ಷ ಮೆ.ಟನ್) ಯೂರಿಯಾ ಗೊಬ್ಬರದ ಪಾಲಿದೆ. ಸದ್ಯಕ್ಕೆ 4-5 ಲಕ್ಷ ಟನ್ ಯೂರಿಯಾ ಸೇರಿ 11.4 ಲಕ್ಷ ಟನ್‌ನಷ್ಟು ರಸಗೊಬ್ಬರ ದಾಸ್ತಾನಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮ ನಾಯಕರನ್ನು ಮೂಲೆಗೆ ಸೇರಿಸಿದ್ದಾರೆ: ಕಾಂಗ್ರೆಸ್ ವಿರುದ್ಧ ಉಲೇಮಾಗಳು ಕಿಡಿ



