– ಚುನಾವಣಾ ಕಣದಿಂದ ಹಿಂದೆ ಸರಿದಿರೋ ಟಿಎಂಸಿ ಅಭ್ಯರ್ಥಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ (Falta) ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಗುರುವಾರ (ಇಂದು) ಶಾಂತಿಯುತ ಮತದಾನ ನಡೆದಿದೆ.
#WATCH | South 24 Parganas, West Bengal: Polling begins in Falta Assembly Constituency.
A voter says, “It is the same as it was back in my childhood. We were scared to cast our votes 15 years back, but not anymore. 15 years back, we were not even allowed to come to the booth,… https://t.co/rEVkJr8ZRJ pic.twitter.com/McrAiRY9BG
— ANI (@ANI) May 21, 2026
ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ (Voting) ಸಂಜೆ 6 ಗಂಟೆ ವೇಳೆಗೆ ಮುಕ್ತಾಯಗೊಂಡಿದ್ದು, 87.73% ಮತದಾನ ದಾಖಲಾಗಿದೆ. ಮತದಾನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಮೇ 24 ರಂದು ಫಲಿತಾಂಶ ಪ್ರಕಟವಾಗಲಿದೆ.
ಬಂಗಾಳದಲ್ಲಿ 2ನೇ ಹಂತದ ಮತದಾನದ ವೇಳೆ ಇವಿಎಂ (EVM) ಯಂತ್ರಗಳಲ್ಲಿ ಅಕ್ರಮ ಅಥವಾ ತಿರುಚುವಿಕೆ ಕಂಡುಬಂದ ಹಿನ್ನೆಲೆ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಭಾರತೀಯ ಚುನಾವಣಾ ಆಯೋಗ ಆದೇಶ ಮಾಡಿತ್ತು.

500 ಕಂಪನಿಗಳ ಭದ್ರತೆ
ಫಾಲ್ಟಾದಲ್ಲಿ ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಪಡೆಗಳ 500 ಕಂಪನಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಜೂನ್ 20 ವರೆಗೂ ಭದ್ರತೆಯನ್ನ ವಿಸ್ತರಣೆ ಮಾಡಿದೆ.
ಕಣದಿಂದ ಹಿಂದೆ ಸರಿದಿರೋ ಟಿಎಂಸಿ ಅಭ್ಯರ್ಥಿ
ಇನ್ನೂ ಮರುಮತದಾನ ನಡೆದ ಫಾಲ್ಟಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಮೇ 19 ರಂದೇ ಮರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದು ಘೋಷಿಸಿದ್ದರು. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದಾರೆ.
ಫಾಲ್ಟಾದಲ್ಲಿ ಇವಿಎಂ ಟ್ಯಾಂಪರಿಂಗ್ ಆರೋಪ!
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರ ಅಡಿಯಲ್ಲಿ ಬರುವ ಫಾಲ್ಟಾ (Falta) ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧೆಡೆ ಇವಿಎಂ ಯಂತ್ರಗಳ ಮೇಲಿನ ಕೆಲವು ಅಭ್ಯರ್ಥಿಗಳ ಬಟನ್ ಅಥವಾ ಪಕ್ಷದ ಗುರುತಿನ ಮೇಲೆ ಅಥವಾ ಬಟನ್ ಮೇಲೆ ಕಪ್ಪು ಟೇಪ್, ಸೆಲೋ ಟೇಪ್ ಅಥವಾ ಸುಗಂಧ ದ್ರವ್ಯವನ್ನು ಹಚ್ಚುವ ಮೂಲಕ ಮತ ಚಲಾವಣೆಗೆ ಅಡ್ಡಿಪಡಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಲಾಗಿತ್ತು. ಫಾಲ್ಟಾ ಒಂದರಲ್ಲೇ ಅತಿ ಹೆಚ್ಚು ಅಂದರೆ 32 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ದೂರುಗಳು ಬಂದಿತ್ತು. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ವೆಬ್‌ಕಾಸ್ಟಿಂಗ್ (Webcasting) ವಿಡಿಯೋಗಳನ್ನು ಮತ್ತು ಪ್ರಿಸೈಡಿಂಗ್ ಅಧಿಕಾರಿಗಳ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಇವಿಎಂ ಮೇಲೆ ಟೇಪ್ ಅಂಟಿಸಿರುವುದು ಸಾಬೀತಾದಲ್ಲಿ ಅಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವುದಾಗಿ ಹೇಳಿತ್ತು. ಇವಿಎಂ ಬಟನ್‌ಗಳಿಗೆ ಸುಗಂಧ ದ್ರವ್ಯ, ಶಾಯಿ (Ink) ಅಥವಾ ಅಂಟು (Glue) ಹಚ್ಚುವುದನ್ನು ಇವಿಎಂ ತಿರುಚುವಿಕೆ (Tampering) ಎಂದು ಪರಿಗಣಿಸಲಾಗುವುದು ಮತ್ತು ಅಂತಹ ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಲಾಗುವುದು ಎಂದು ಆಯೋಗ ಮೊದಲೇ ತಿಳಿಸಿತ್ತು. ಅದರಂತೆ ಇದೀಗ ಮರು ಮತದಾನಕ್ಕೆ ಆದೇಶ ನೀಡಿದೆ.
ಸುಗಂಧ ದ್ರವ್ಯ ಲೇಪಿಸಿದ್ದು ಯಾಕೆ?
ನಿರ್ದಿಷ್ಟ ಅಭ್ಯರ್ಥಿಯ ಬಟನ್‌ಗೆ ಸುಗಂಧ ದ್ರವ್ಯವನ್ನು ಹಚ್ಚುವುದರಿಂದ, ಆ ಬಟನ್ ಒತ್ತಿದ ಮತದಾರನ ಬೆರಳಿಗೆ ಆ ಪರಿಮಳ ಅಂಟಿಕೊಳ್ಳುತ್ತದೆ. ಮತಗಟ್ಟೆಯಿಂದ ಹೊರಬಂದ ನಂತರ ಮತದಾರರ ಬೆರಳನ್ನು ಪರಿಮಳ ನೋಡುವ ಮೂಲಕ ಅವರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕೆಲವು ರಾಜಕೀಯ ಕಾರ್ಯಕರ್ತರು ಈ ತಂತ್ರ ಬಳಸುತ್ತಾರೆ.

