ಕೋಲ್ಕತ್ತಾ: ಪಶ್ಚಿಮ ಬಂಗಾಳದ(West Bengal) ಎಲ್ಲಾ ಮದರಸಾಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ವಂದೇ ಮಾತರಂ (Vande Mataram) ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ನೇತೃತ್ವದ ನೂತನ ಬಿಜೆಪಿ ಸರ್ಕಾರವು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಮೇ 14 ರಂದು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸಿದ ಬೆನ್ನಲ್ಲೇ, ಈಗ ಮದರಸಾ (Madrasas) ಶಿಕ್ಷಣ ಇಲಾಖೆಯೂ ಈ ನಿಯಮವನ್ನು ವಿಸ್ತರಿಸಿದೆ.
ಯಾರಿಗೆಲ್ಲ ಅನ್ವಯಿಸುತ್ತದೆ?
ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಿಗೆ ಇದು ಅನ್ವಯಿಸುತ್ತದೆ. ಸರ್ಕಾರಿ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಮದರಸಾಗಳು, ಸರ್ಕಾರಿ ಅನುಮೋದಿತ ಶಿಶು ಶಿಕ್ಷಾ ಕೇಂದ್ರಗಳು (SSK) ಮತ್ತು ಮಾಧ್ಯಮಿಕ ಶಿಕ್ಷಾ ಕೇಂದ್ರಗಳಿಗೆ (MSK) ಆದೇಶ ಅನ್ವಯವಾಗುತ್ತದೆ.
ಈ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದ್ದು, ದಿನದ ತರಗತಿಗಳು ಆರಂಭವಾಗುವ ಮುನ್ನ ನಡೆಯುವ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ (Assembly Prayers) ವಿದ್ಯಾರ್ಥಿಗಳು ಕಡ್ಡಾಯವಾಗಿ ರಾಷ್ಟ್ರಗೀತೆಯೊಂದಿಗೆ ವಂದೇ ಮಾತರಂ ಗೀತೆಯನ್ನು ಹಾಡಬೇಕು. ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಅಂತ ಘೋಷಿಸಿ – ಕೇಂದ್ರಕ್ಕೆ ಬಾಬರಿ ಪ್ರಕರಣದ ವಾದಿ ಇಕ್ಬಾಲ್ ಅನ್ಸಾರಿ ಮನವಿ

ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಾರ್ಥನಾ ಪದ್ಧತಿಯಲ್ಲಿ ಏಕರೂಪತೆ ಮತ್ತು ಸಮರೂಪತೆಯನ್ನು ತರಲು ಹಾಗೂ ದೇಶಪ್ರೇಮದ ಭಾವನೆಯನ್ನು ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದಿನ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ಶಾಲೆಗಳಲ್ಲಿ ರಾಜ್ಯ ಗೀತೆಯಾದ ‘ಬಾಂಗ್ಲರ್ ಮಾತಿ ಬಾಂಗ್ಲರ್ ಜೋಲ್’ ಅನ್ನು ಕಡ್ಡಾಯಗೊಳಿಸಿತ್ತು. ಆದರೆ ಈಗಿನ ಹೊಸ ಆದೇಶವು ಹಿಂದಿನ ಎಲ್ಲಾ ಪದ್ಧತಿ ಹಾಗೂ ಆದೇಶಗಳನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ಪ್ರಮಾಣವಚನ ವೇಳೆ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕ ಉದ್ಧಟತನ – ಗವರ್ನರ್ ಆಕ್ಷೇಪ

