– 10ಕ್ಕೂ ಹೆಚ್ಚು ನಕಲಿ ಅಕೌಂಟ್
– 100ಕ್ಕೂ ಹೆಚ್ಚು ಅಶ್ಲೀಲ ಫೋಟೋ ಕ್ರಿಯೇಟ್
ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಮಹಿಳೆ ಫ್ರೆಂಡ್ ರಿಕ್ವೆಸ್ಟ್ ನಿರಾಕರಿಸಿದ್ದಕ್ಕೆ, ದೆಹಲಿಯ ವ್ಯಕ್ತಿಯೊಬ್ಬ ಎಐ ಬಳಸಿ ಮಹಿಳೆ ಹಾಗೂ ಆಕೆಯ ತಾಯಿಯ ಅಶ್ಲೀಲ ಮಾರ್ಫ್ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
27 ವರ್ಷದ ಸುಮಿತ್ ನೆಮಚಂದ್ ಶರ್ಮಾ ಬಂಧಿತ ಆರೋಪಿ. ಈತ ಸೋಷಿಯಲ್ ಮೀಡಿಯಾದಲ್ಲಿ ಪೂಜಾರಿ ಎಂದು ಹೇಳಿ, ಧಾರ್ಮಿಕ ವಿಡಿಯೋಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಭುವನೇಶ್ವರಕ್ಕೆ ಹೊರಟಿದ್ದ ಆಕಾಶ ಏರ್ ವಿಮಾನ ಲಕ್ನೋದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್

ಗುಜರಾತ್ ಮೂಲದ ಮಹಿಳೆಗೆ ಇನ್‌ಸ್ಟಾಗ್ರಾಮ್ ಮೂಲಕ ಸುಮಿತ್ ಪರಿಚಯವಾಗಿದ್ದ. ಆರಂಭದಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಈತ, ಬಳಿಕ ಮಹಿಳೆಗೆ ಇನ್‌ಸ್ಟಾದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ನೇಹ ಬೆಳೆಸಲು ಯತ್ನಿಸಿದ್ದಾನೆ. ಆದರೆ ಮಹಿಳೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಸುಮಿತ್ ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿನ ಫೋಟೋಗಳನ್ನು ಹ್ಯಾಕ್ ಮಾಡಿದ್ದಾನೆ. ಬಳಿಕ ಅವುಗಳನ್ನು ಎಐ ಮೂಲಕ ಎಡಿಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇದನ್ನೂ ಓದಿ: ತ್ವಿಶಾ ಶರ್ಮಾ ಸಾವು ಕೇಸ್; ನಟಿಯ ಅತ್ತೆ & ನಿವೃತ್ತ ಜಡ್ಜ್ ಬಂಧನ
ಆರೋಪಿಯು ಮಹಿಳೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಆಕೆಯ ಹಾಗೂ ತಾಯಿಯ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದ. ಫೇಕ್ ಇಮೇಜ್‌ಗಳನ್ನು ಸೃಷ್ಟಿಸಲು ಗೂಗಲ್‌ನಲ್ಲಿ ಎಐ ರಿಮೂವ್ ಕ್ಲೋತ್ಸ್ ಎಂಬ ಟೂಲ್‌ಗಳನ್ನು ಹುಡುಕಿ ಬಳಸಿದ್ದಾನೆ. ಬಳಿಕ ಎಐ ಸಹಾಯದಿಂದ 100ಕ್ಕೂ ಹೆಚ್ಚು ಅಶ್ಲೀಲ ಮಾರ್ಫ್ ಫೋಟೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಹೆಸರಿನಲ್ಲಿ ಮೂರು ನಕಲಿ ಇನ್‌ಸ್ಟಾಗ್ರಾಂ ಖಾತೆಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳನ್ನು ಕ್ರಿಯೇಟ್ ಮಾಡಿದ್ದಾನೆ. ಆ ಖಾತೆಗಳಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿ, ಮಹಿಳೆ ಹಾಗೂ ಆಕೆಯ ಕುಟುಂಬದ ಮಾನಹಾನಿಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ತನಿಖೆ ವೇಳೆ ಆರೋಪಿಯು ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಸೇರಿ ಹಲವು ಸೋಷಿಯಲ್ ಮೀಡಿಯಾಗಳಲ್ಲಿ 8 ರಿಂದ 10 ನಕಲಿ ಖಾತೆಗಳನ್ನು ತೆರೆದಿದ್ದಾನೆ.
ಈ ಕುರಿತು ಮಹಿಳೆ ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದರು. ಇನ್ಸ್ಪೆಕ್ಟರ್ ಎಂ.ಎಚ್ ಭೆಟಾರಿಯಾ ನೇತೃತ್ವದ ತಂಡ ಡಿಜಿಟಲ್ ಟ್ರ‍್ಯಾಕಿಂಗ್ ಮೂಲಕ ಆರೋಪಿಯನ್ನು ದೆಹಲಿಯ ಉತ್ತರ-ಪೂರ್ವ ಭಾಗದ ಉಸ್ಮಾನ್‌ಪುರದಲ್ಲಿ ಪತ್ತೆ ಹಚ್ಚಿ ಬಂಧಿಸಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೇ ತಿಂಗಳ ಮೊದಲ ವಾರದಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
