– ಬೀದಿ ನಾಯಿಗಳ ಸ್ಥಳಾಂತರ ಆದೇಶ ಹಿಂಪಡೆಯಲ್ಲ
– ಜನರು, ಮಕ್ಕಳ ಮೇಲಿನ ನಾಯಿ ದಾಳಿ ನಿರ್ಲಕ್ಷಿಸಲು ಸಾಧ್ಯವಿಲ್ಲ
ನವದೆಹಲಿ: ಬೀದಿ ನಾಯಿಗಳ (Street Dogs) ನಿಯಂತ್ರಣಕ್ಕೆ ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಆದೇಶಿಸಿದ್ದ ಸುಪ್ರೀಂ ಕೋರ್ಟ್ (Supreme Court), ತನ್ನ ಆದೇಶವನ್ನು ಹಿಂಪಡೆಯುವುದಿಲ್ಲ ಎಂದು ಒತ್ತಿ ಹೇಳಿದೆ. ಈ ಮೂಲಕ ಹಿಂದಿನ ಆದೇಶವನ್ನು ತಿದ್ದುಪಡಿ ಮಾಡಬೇಕು ಎಂದು ಸಲ್ಲಿಸಲಾದ ಅರ್ಜಿಗಳನ್ನು ಇಂದು (ಮೇ 19) ವಜಾಗೊಳಿಸಿದೆ.
ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಅವುಗಳಿಗೆ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಔಷಧ ನೀಡಬೇಕು. ಆ ನಾಯಿಗಳನ್ನು ಮತ್ತೆ ಮೊದಲಿದ್ದ ಪ್ರದೇಶಗಳಿಗೆ ಬಿಡಬಾರದು. ಈ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಸರ್ಕಾರಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ 2025ರ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ತಿದ್ದುಪಡಿ ಮಾಡಬೇಕು ಎಂದು ಶ್ವಾನ ಪ್ರಿಯರು ಹಾಗೂ ಸಾಮಾಜಿಕ ಕಾರ್ಯಕ್ರತರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಬೀದಿನಾಯಿಗಳ ಸಮಸ್ಯೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ – ಸುಪ್ರೀಂ ಅಸಮಾಧಾನ

ಅರ್ಜಿಯಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವುದರಿಂದ ಹೆಚ್ಚಿನ ಗೊಂದಲ ಉಂಟಾಗಬಹುದು. ಇದು ಹೆಚ್ಚಿನ ದಾಳಿಗಳಿಗೆ ಕಾರಣವಾಗಬಹುದು ಎಂದು ಸಾಮಾಜಿಕ ಕಾರ್ಯಕರ್ತರು ವಾದಿಸಿದ್ದರು. ಆದರೆ ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ತ್ರಿ ಸದಸ್ಯ ಪೀಠವು ಈ ವಾದವನ್ನು ಒಪ್ಪಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳು ಇರೋದು ಆತಂಕಕಾರಿ. ಪ್ರಾಣಿಗಳು, ಜನರು, ವಿಶೇಷವಾಗಿ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ಮಾಡಿದ ಪ್ರಕರಣಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಇದೇ ವೇಳೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿದ ಮಾನದಂಡ ಕಾರ್ಯಾಚರಣೆಯನ್ನು ಪ್ರಶ್ನಿಸುವ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಹಿಂದಿನ ತೀರ್ಪನ್ನು ಹಿಂಪಡೆಯಲು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನಾವು ಕೂಲಂಕುಷವಾಗಿ ಪರಿಶೀಲಿಸಿದ್ದೇವೆ. ಆದರೆ ಆ ಎಲ್ಲಾ ಅರ್ಜಿಗಳನ್ನು ವಜಾಗೊಳಿಸುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದೇ ವೇಳೆ, ರಾಜ್ಯ ಸರ್ಕಾರಗಳು ಹಿಂದಿನ ಸೂಚನೆಗಳನ್ನು ಪಾಲಿಸಲು ವಿಫಲವಾಗಿವೆ ಎಂದು ನ್ಯಾಯಾಲಯವು ಟೀಕಿಸಿದೆ.
ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಪ್ರಾಣಿ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್ ಉದ್ದೇಶ ಈಡೇರಿಲ್ಲ. ರಾಜ್ಯಗಳು ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ಹೊರಹಾಕಿದೆ.
ಇಂದು ಹೊರಡಿಸಲಾದ ನಿರ್ದೇಶನಗಳು
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು AWBI ನಿಯಮಗಳನ್ನು ಜಾರಿಗೊಳಿಸಬೇಕು,
ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪ್ರಾಣಿ ಜನನ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಬೇಕು,
ರೇಬೀಸ್ ವಿರೋಧಿ ಲಸಿಕೆಗಳು ಮತ್ತು ಇಮ್ಯುನೊಗ್ಲಾಬ್ಯುಲಿನ್‌ಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು,
ಈ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ನಿಯೋಜಿಸಲಾದ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ರೇಬಿಸ್ ಸೋಂಕು ಮತ್ತು ಗಂಭೀರ ರೋಗಗಳಿಂದ ಬಳಲುತ್ತಿರುವ, ಮನುಷ್ಯರಿಗೆ ಅಪಾಯಕಾರಿಯಾದ ನಾಯಿಗಳನ್ನು ಕೊಲ್ಲುವುದಕ್ಕೆ ಅಧಿಕಾರಿಗಳಿಗೆ ಕೋರ್ಟ್ ಅನುಮತಿ ನೀಡಿದೆ. ಅಂತಹ ಅಧಿಕಾರಿಗಳ ವಿರುದ್ಧ ಯಾವುದೇ FIR, ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ವ್ಯವಸ್ಥಿತ ಪ್ರಯತ್ನ ಮಾಡಬೇಕು ಎಂದು ಸೂಚಿಸಿದೆ.
ನವೆಂಬರ್ 2025ರ ತೀರ್ಪು ಏನಿತ್ತು?
ಕಳೆದ ವರ್ಷ ನ್ಯಾಯಾಲಯವು ಅಧಿಕಾರಿಗಳಿಗೆ ಆಸ್ಪತ್ರೆಗಳು, ಉದ್ಯಾನವನಗಳು, ರೈಲ್ವೆ ನಿಲ್ದಾಣಗಳು ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿತ್ತು.
ಒಮ್ಮೆ ವ್ಯಾಕ್ಸಿನೇಷನ್ ಮಾಡಿದ ನಂತರ ಈ ನಾಯಿಗಳನ್ನು ಅವುಗಳನ್ನು ಮೊದಲಿದ್ದ ಪ್ರದೇಶಗಳಿಗೆ ಬಿಡಬಾರದು. ಅಲ್ಲದೇ ಗೊತ್ತುಪಡಿಸಿದ ಪ್ರದೇಶಗಳನ್ನು ಹೊರತುಪಡಿಸಿ, ಸಾರ್ವಜನಿಕವಾಗಿ ನಾಯಿಗಳಿಗೆ ಆಹಾರವನ್ನು ನೀಡುವುದನ್ನು ಸಹ ನ್ಯಾಯಾಲಯ ನಿಷೇಧಿಸಿ ಆದೇಶ ಹೊರಡಿಸಿತ್ತು.
ಜುಲೈನಲ್ಲಿ ನ್ಯಾಯಾಲಯವು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ತೀರ್ಪು ನೀಡಿತ್ತು. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

