ಕಿನ್ಶಾಸ: ಆಫ್ರಿಕಾದ ಕಾಂಗೋದಲ್ಲಿ (Congo) ಎಬೋಲಾ (Ebola) ಮಾರಣಾಂತಿಕ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ನಾವು ಎಬೋಲಾ ಸೋಂಕನ್ನು ಹಗುರವಾಗಿ ತೆಗೆದುಕೊಂಡಿಲ್ಲ. ಈ ರೋಗದ ಪ್ರಮಾಣ ಮತ್ತು ವೇಗದ ಬಗ್ಗೆ ನಮಗೆ ತೀವ್ರ ಕಳವಳ ಇದೆ ಎಂದು ಹೇಳಿದ್ದಾರೆ.
ಈ ಹಿಂದೆ 2014-2016ರ ನಡುವೆ ಪಶ್ಚಿಮ ಆಫ್ರಿಕಾದಲ್ಲಿ ಜೈರ್ ತಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರುವ ಈ ರೋಗಕ್ಕೆ ಸದ್ಯಕ್ಕೆ ಯಾವುದೇ ಲಸಿಕೆ ಇಲ್ಲ ಎನ್ನಲಾಗಿದೆ. ಇದನ್ನೂ ಓದಿ: ಆಫ್ರಿಕಾದಲ್ಲಿ ಎಬೋಲಾಕ್ಕೆ 88 ಬಲಿ – ತುರ್ತು ಪರಿಸ್ಥಿತಿ ಘೋಷಿಸಿದ WHO
ಇದು ಮುಖ್ಯವಾಗಿ ಇಟುರಿ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತ್ತು. ಆದರೆ, ನೆರೆಯ ಉತ್ತರ ಕಿವು ಪ್ರಾಂತ್ಯದಲ್ಲೂ ಕೂಡ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದು, ಸದ್ಯಕ್ಕೆ ಆ ಭಾಗ ಸುರಕ್ಷಿತವಾಗಿದೆ ಎನ್ನಲಾಗಿದೆ.
ರುವಾಂಡ, ಬರುಂಡಿ ಮತ್ತು ಟಾಂಜಾನಿಯ ಸೇರಿದಂತೆ ನೆರೆಯ ರಾಷ್ಟ್ರಗಳು ಕಣ್ಗಾವಲು, ಗಡಿ ತಪಾಸಣೆ ಮತ್ತು ತುರ್ತು ಸಿದ್ಧತೆ ಕ್ರಮಗಳನ್ನು ಹೆಚ್ಚಿಸಿವೆ. ಆಫ್ರಿಕಾ ರೋಗ ನಿಯಂತ್ರಣ ಕೇಂದ್ರಗಳನ್ನು ಸೋಮವಾರ ಇದ್ದಕ್ಕಿದ್ದಂತೆ ಭೂ ಖಂಡದ ಭದ್ರತೆಯ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸಲಾಗಿದೆ.
ಲಸಿಕೆಯ ಅಲಭ್ಯತೆಯ ನಡುವೆ ಈ ವೈರಸ್ ಅನ್ನು ತಡೆಗಟ್ಟಲು ದೇಶ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಟೆಡ್ರೊಸ್ ಹೇಳಿದರು.
ಕಾಂಗೋ ಆರೋಗ್ಯ ಸಚಿವ ರೋಜರ್ ಕಂಬಾ ಮಾತನಾಡಿ, ಮಂಗಳವಾರ ದೇಶಾದ್ಯಂತ ಒಟ್ಟು 543 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 32 ಪ್ರಕರಣಗಳನ್ನು ಪ್ರಯೋಗಾಲಯ ದೃಢೀಕರಿಸಿದೆ. ಸಂಭವಿಸಿರುವ 136 ಸಾವುಗಳು ಈ ರೋಗದ ಶಂಕಿತ ಪ್ರಕರಣಗಳಾಗಿವೆ. ಪ್ರಸ್ತುತ 69 ರೋಗಿಗಳು ಎಬೋಲಾ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

