Paneer Bhurji Recipe: ಪನೀರ್ ಪ್ರಿಯರಿಗೆ ಪನೀರ್ ಭುರ್ಜಿ ಸುಲಭವಾಗಿ ತಯಾರಿಸಬಹುದಾದ ರುಚಿಕರವಾದ ಖಾದ್ಯ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ಸಂಜೆ ಸ್ನ್ಯಾಕ್ಸ್ಗೆ ಇದನ್ನು ತಯಾರಿಸಬಹುದು. ಪನೀರ್, ಈರುಳ್ಳಿ, ಟೊಮೆಟೊ ಮತ್ತು ಮಸಾಲೆಗಳನ್ನು ಬಳಸಿ ಕಡಿಮೆ ಸಮಯದಲ್ಲೇ ಈ ರೆಸಿಪಿಯನ್ನು ಮನೆಯಲ್ಲೇ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು ಮತ್ತು ಅಳತೆ
ಪನೀರ್ – 200 ಗ್ರಾಂ (ಪುಡಿ ಮಾಡಿದ್ದು ಅಥವಾ ತುರಿದದ್ದು)
ಈರುಳ್ಳಿ – 1 ಮಧ್ಯಮ ಗಾತ್ರದ್ದು (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ – 1 ಮಧ್ಯಮ ಗಾತ್ರದ್ದು (ಸಣ್ಣಗೆ ಹೆಚ್ಚಿದ್ದು)
ಹಸಿರು ಮೆಣಸಿನಕಾಯಿ – 1 ಅಥವಾ 2 (ಸಣ್ಣಗೆ ಹೆಚ್ಚಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಿಗೆ – ½ ಚಮಚ
ಅರಿಶಿನ ಪುಡಿ – ¼ ಚಮಚ
ಖಾರದ ಪುಡಿ – ½ ಚಮಚ
ಗರಂ ಮಸಾಲಾ – ¼ ಚಮಚ
ಎಣ್ಣೆ ಅಥವಾ ತುಪ್ಪ – 1 ರಿಂದ 2 ದೊಡ್ಡ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಚಟಪಟ ಸಿಡಿಯಲು ಬಿಡಿ. ನಂತರ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ 2–3 ನಿಮಿಷಗಳ ಕಾಲ ಹುರಿಯಿರಿ. ಈರುಳ್ಳಿ ತಿಳಿ ಹಳದಿ ಬಣ್ಣಕ್ಕೆ ಬರುವವರೆಗೆ ಹುರಿಯಬೇಕು.
ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಅದರ ಹಸಿ ವಾಸನೆ ಹೋಗುವವರೆಗೆ ಸುಮಾರು 1 ನಿಮಿಷ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಮತ್ತು ಸ್ವಲ್ಪ ಉಪ್ಪು ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
ಟೊಮೆಟೊ ಮೆತ್ತಗಾದ ಬಳಿಕ ಅರಿಶಿನ ಪುಡಿ, ಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಪುಡಿ ಮಾಡಿದ ಅಥವಾ ತುರಿದ ಪನೀರ್ ಅನ್ನು ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಪನೀರ್ ಸಾಫ್ಟ್ ಆಗಿರಲು ಮಧ್ಯಮ ಉರಿಯಲ್ಲಿ ಕೇವಲ 2–3 ನಿಮಿಷ ಮಾತ್ರ ಬೇಯಿಸಿ. ಹೆಚ್ಚು ಹೊತ್ತು ಬೇಯಿಸಿದರೆ ಪನೀರ್ ಗಟ್ಟಿಯಾಗಬಹುದು. ಕೊನೆಯದಾಗಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ ಒಲೆ ಆಫ್ ಮಾಡಿ.
ರುಚಿಯಾದ ಪನೀರ್ ಭುರ್ಜಿಯನ್ನು ಬಿಸಿ ಬಿಸಿಯಾಗಿ ರೊಟ್ಟಿ, ಚಪಾತಿ, ಬ್ರೆಡ್ ಅಥವಾ ಪರೋಟಾದೊಂದಿಗೆ ಸವಿಯಬಹುದು.

