– ಮಾತುಕತೆ ಬಳಿಕ ಬಸ್ ಸೇವೆ ಆರಂಭ
ಬೆಂಗಳೂರು: ಕತ್ರಿಗುಪ್ಪೆಯ ಕಾಮಾಕ್ಯ (Kamakya) ಎಲೆಕ್ಟ್ರಿಕಲ್ ಡಿಪೋ 13ರಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಲಕರ ಪ್ರತಿಭಟನೆ ನಡೆಸಿದ್ದಾರೆ. ಇದರ ಪರಿಣಾಮ 100ಕ್ಕೂ ಹೆಚ್ಚು ಬಿಎಂಟಿಸಿ (BMTC) ಇವಿ ಬಸ್‌ಗಳ ಕಾರ್ಯಚರಣೆ ಸ್ಥಗಿತಗೊಂಡಿತ್ತು. ಮಾತುಕತೆ ಬಳಿಕ ಬಸ್ ಸೇವೆ ಪುನರಾರಂಭಗೊಂಡಿದೆ.ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಚಾಲಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಬೇರೆ ಡಿಪೋಗಳಲ್ಲಿ ಚಾಲಕರಿಗೆ ದಿನಕ್ಕೆ 950 ರೂ. ನೀಡಲಾಗುತ್ತಿದೆ. ಆದರೆ ನಮಗೆ 850 ರೂ. ನಿಗದಿ ಮಾಡಲಾಗಿದೆ. ಹೀಗಾಗಿ ನಮಗೂ 950 ರೂ. ನೀಡಿ ಎಂದು ಪಟ್ಟು ಹಿಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 400ಕ್ಕೂ ಅಧಿಕ ಇವಿ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ: ದುಷ್ಕೃತ್ಯದ ಶಂಕೆ
ಚಾಲಕರು ಕಾರ್ಯಾಚರಣೆ ನಿಲ್ಲಿಸಿದ್ದರಿಂದ ಬೆಳಗ್ಗೆಯಿಂದ ಇವಿ ಬಸ್‌ಗಳು ಡಿಪೋದಿಂದ ಹೊರಬಂದಿಲ್ಲ. ಪರಿಣಾಮ ಕಾಮಾಕ್ಯ ಡಿಪೋದಿಂದ ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಏರ್‌ಪೋರ್ಟ್ ಮಾರ್ಗದಲ್ಲಿ ಸಂಚರಿಸ್ತಿದ್ದ ಬಸ್‌ಗಳು ಕಡಿಮೆಯಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಮಾತುಕತೆ ಬಳಿ ಸೇವೆ ಪುನರಾರಂಭ:
ವಿದ್ಯುತ್ ಬಸ್‌ಗಳ ಚಾಲಕರು ಇಂದು ಯಾವುದೇ ಮುನ್ಸೂಚನೆ ನೀಡದೆ ತಾತ್ಕಾಲಿಕವಾಗಿ ಮುಷ್ಕರ ಕೈಗೊಂಡಿದ್ದರು. ವಿಷಯ ತಿಳಿದ ತಕ್ಷಣ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಆಂಥೋನಿ ಜಾರ್ಜ್, ವೋಲ್ವೋ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಡಿಪೋಗೆ ಭೇಟಿ ನೀಡಿ, EV ಬಸ್‌ಗಳ ನಿರ್ವಾಹಕರೊಂದಿಗೆ ಮಾತುಕತೆ ನಡೆಸಿದರು.
ಮಾತುಕತೆಯ ಸಂದರ್ಭದಲ್ಲಿ, ಡಿಪೋ-13ರ ಎಲ್ಲಾ EV ಚಾಲಕರ ಜುಲೈ ತಿಂಗಳ ವೇತನವನ್ನು ಈಗಾಗಲೇ ಪಾವತಿಸಲಾಗಿದ್ದು, ವೇತನಕ್ಕೆ ಸಂಬಂಧಿಸಿದ ಎಲ್ಲಾ ಭತ್ಯೆಗಳು, ಪ್ರೋತ್ಸಾಹಧನ ಹಾಗೂ ಇತರ ಪಾವತಿಗಳನ್ನೂ ಇತ್ಯರ್ಥಪಡಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕರು ದೃಢಪಡಿಸಿದರು.
ಹೆಚ್ಚುವರಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಚಾಲಕರು ತಾತ್ಕಾಲಿಕ ಮುಷ್ಕರ ಕೈಗೊಂಡಿದ್ದರು. ಅಧಿಕಾರಿಗಳ ಮನವೊಲಿಕೆ ಹಾಗೂ ಮಾತುಕತೆಯ ನಂತರ ಚಾಲಕರು ಕರ್ತವ್ಯಕ್ಕೆ ಹಾಜರಾಗಿದ್ದು, ಮೊದಲ ಪಾಳಿಯ ಬಸ್‌ಗಳ ಕಾರ್ಯಾಚರಣೆ ಆರಂಭಗೊಂಡಿದ್ದು, ಸಾಮಾನ್ಯ ಪಾಳಿಯ ಬಸ್‌ಗಳ ಕಾರ್ಯಾಚರಣೆಯೂ ಪುನರಾರಂಭಗೊಂಡಿದೆ.

