ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನಟರಾಕ್ಷಸ ಡಾಲಿ ಧನಂಜಯ್ (Dolly Dhananjay) , ಉತ್ತರಕಾಂಡದ ನಿರ್ದೇಶಕ ರೋಹಿತ್ ಪದಕಿ (Rohit Padaki) ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಇಂದು ಧಾರವಾಡದ ನುಗ್ಗೇಕೇರಿಯ ಶ್ರೀ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ನುಗ್ಗೇಕೇರಿ ಶ್ರೀ ಹನುಮಂತ ದೇವಾಲಯ ಧಾರವಾಡದ ಪುರಾತನ ಮತ್ತು ಪ್ರಖ್ಯಾತ ದೇವಾಲಯವಾಗಿದೆ. ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರಲಿದೆ.
ಈ ನಡುವೆ ರಮ್ಯಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಸುದ್ದಿ ನೀಡಿದ್ದರು. ಉತ್ತರ ಕಾಂಡ ಸಿನಿಮಾದ ಮೂಲಕ ರಮ್ಯಾ (Ramya) ಮತ್ತೆ ಬೆಳ್ಳಿಪರದೆಗೆ ಕಮ್ಬ್ಯಾಕ್ ಆಗುತ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಖುಷಿಪಟ್ಟಿದ್ದರು. ಇದೀಗ ಅಭಿಮಾನಿಗಳಿಗೆ ರಮ್ಯಾ ನಿರಾಸೆ ಮೂಡಿಸಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರಕ್ಕೆ ನಟಿ ಕೈಕೊಟ್ಟಿದ್ದಾರೆ.
ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ (Uttarakanda Film) ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.