- ದೇವಿ ದರ್ಶನ ಪಡೆದ ನಟಿ ಅಮೂಲ್ಯ
ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಬಿಂಡಿಗ ದೇವಿರಮ್ಮನ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ. ನರಕ ಚತುರ್ದಶಿಯ ಶುಭದಿನದಂದು ದೇವಿಯ ದರ್ಶನ ಪಡೆಯಲು ಭಕ್ತರು ಮುಂಜಾನೆಯಿಂದಲೇ ಬೆಟ್ಟ ಏರಲು ಆರಂಭಿಸಿದ್ದರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಗಮಿಸಿರುವ ಸಾವಿರಾರು ಭಕ್ತರು ಬರಿಗಾಲಲ್ಲೇ ಕಲ್ಲು-ಮುಳ್ಳಿನ ಕಠಿಣ ಹಾದಿಯಲ್ಲಿ ಸಾಗುತ್ತಾ, ಬರೋಬ್ಬರಿ 3800 ಅಡಿ ಎತ್ತರದ ಕಡಿದಾದ ಬೆಟ್ಟವನ್ನು ಭಕ್ತಿಭಾವದಿಂದ ಏರುತ್ತಿದ್ದಾರೆ. ನಟಿ ಅಮೂಲ್ಯ ಅವರು ಬೆಟ್ಟವೇರಿ ದೇವಿಯ ದರ್ಶನ ಪಡೆದಿದ್ದಾರೆ.
ವರ್ಷದಿಂದ ವರ್ಷಕ್ಕೆ ಈ ದೇವಿರಮ್ಮನ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ಸದ್ಯ ಬೆಟ್ಟದ ತುಂಬೆಲ್ಲಾ ಭಕ್ತರ ದಂಡೇ ಕಾಣಿಸುತ್ತಿದೆ. ಪುರಾಣ ಪ್ರಸಿದ್ಧವಾದ ಈ ಪುಣ್ಯ ಕ್ಷೇತ್ರಕ್ಕೆ ಮೈಸೂರು ಅರಸರ ಮನೆಯಿಂದ ಇಂದಿಗೂ ದೇವಿಗೆ ಒಪ್ಪಿಸಲಾಗುವ ಮಡಲಕ್ಕಿ ಸೇವೆ ಈ ಐತಿಹಾಸಿಕ ಜಾತ್ರೆಯ ಧಾರ್ಮಿಕ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಭಕ್ತರ ಅನುಕೂಲಕ್ಕಾಗಿ ಸತತ ಎರಡು ದಿನಗಳ ಕಾಲ ಬೆಟ್ಟ ಏರಲು ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಸದ್ಯ ಹಗಲಿನಲ್ಲಿ ಮಾತ್ರ ಭಕ್ತರು ಬೆಟ್ಟ ಏರುತ್ತಿದ್ದಾರೆ. ಇಂದು ಸುಮಾರು 50 ಸಾವಿರ ಭಕ್ತರು ಬೆಟ್ಟ ಹತ್ತುವ ಸಾಧ್ಯತೆ ಇದೆ. ಇದನ್ನೂ ಓದಿ: ವರ್ಷಕ್ಕೊಮ್ಮೆ ದರ್ಶನ ಕೊಡುವ ದೇವಿರಮ್ಮನ ಪೂಜೆಗೆ ಭಕ್ತರ ದಂಡು
ಭಕ್ತರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ರಾತ್ರಿ ವೇಳೆಯಲ್ಲಿ ಬೆಟ್ಟ ಏರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಮೂಲ ಸೌಕರ್ಯಗಳನ್ನು ಒದಗಿಸಿದೆ. ಬೆಟ್ಟ ಏರುತ್ತಿರುವ ಭಕ್ತರಿಗೆ ಕುಡಿಯುವ ನೀರು, ಸಾರಿಗೆಗಾಗಿ ವಿಶೇಷ ಬಸ್ ಹಾಗೂ ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಆಂಬುಲೆನ್ಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಬೆಟ್ಟದಲ್ಲಿ ರೋಪ್ ಹಾಕುವ ಮೂಲಕ ಭಕ್ತರು ಹತ್ತಲು ಸಹಾಯ ಆಗುವಂತೆ ವ್ಯವಸ್ಥೆ ಮಾಡಲಾಗಿದೆ.
ವಾಹನ ದಟ್ಟಣೆ ತಪ್ಪಿಸಲು ಪಾರ್ಕಿಂಗ್ಗಾಗಿ ಸುಸಜ್ಜಿತ ವ್ಯವಸ್ಥೆಯನ್ನು ಆಡಳಿತ ಮಂಡಳಿ ಕಲ್ಪಿಸಿದೆ. ಇನ್ನು, ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಭಕ್ತರು ಸೇರಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ ವಹಿಸಲಾಗಿದ್ದು, ಬೆಟ್ಟದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸುವ ಮೂಲಕ ಜಾತ್ರೆ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ದೇವಿರಮ್ಮನ ದರ್ಶನದಿಂದ ದೀಪಾವಳಿಗೆ ಚಾಲನೆ – ಏನಿದು ಮಲೆನಾಡಿಗರ ಹಬ್ಬದ ವಿಶೇಷ?

