ದಿವಂಗತ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ನಿಧನದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬೆಂಗಳೂರಿನ ಯುವಕ ರಿತ್ವಿಕ್ ಶರ್ಮಾನಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಿತ್ವಿಕ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಕಟು ಪದಗಳಿಂದ ಅಸಮಾಧಾನ ವ್ಯಕ್ತಪಡಿಸಿತ್ತು.
ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಮುಕ್ತ ಅವಕಾಶವಿದೆ ಎಂದ ಮಾತ್ರಕ್ಕೆ ಇಂತಹ ವಿಕೃತ ಸಂದೇಶಗಳನ್ನು ಪೋಸ್ಟ್ ಮಾಡುತ್ತೀರಾ?. ಪುನೀತ್ ರಾಜ್‌ಕುಮಾರ್ ಅವರು ಮೇರುನಟ ಡಾ. ರಾಜ್‌ಕುಮಾರ್ ಅವರ ಪುತ್ರ. ಅವರು ನಿಧನರಾದ ಸಂದರ್ಭದಲ್ಲಿ ಇಂತಹ ಆಕ್ಷೇಪಾರ್ಹ ಪದ ಬಳಕೆ ಮಾಡಬಹುದೇ? ಯಾವ ರೀತಿಯ ಪದ ಬಳಸಲಾಗಿದೆ ಎಂಬುದು ನಿಮಗೆ ಗೊತ್ತೇ? ಎಂದು ಪ್ರಶ್ನಿಸಿ ತೀವ್ರ ಆಕ್ರೋಶ ಹೊರಹಾಕಿತು. ಇದನ್ನೂ ಓದಿ: ಗಣೇಶೋತ್ಸವದ ರೋಚಕ ಕಥೆ ‘ಜನ್ಮೋತ್ಸವ’ ಚಿತ್ರದ ಟ್ರೇಲರ್ ರಿಲೀಸ್
ಅರ್ಜಿದಾರ ರಿತ್ವಿಕ್ ಪರ ವಕೀಲೆ ಪದ್ಮಾವತಿ ವಾದ ಮಂಡಿಸಿ, ಕಕ್ಷಿದಾರರಾದ ರಿತ್ವಿಕ್ ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. ಅವರಿಗೆ ಈ ಪೋಸ್ಟ್‌ನ ಗಂಭೀರ ಪರಿಣಾಮಗಳ ಅರಿವಿರಲಿಲ್ಲ. ಈ ಪೋಸ್ಟ್ ಅನ್ನು ಆತನ ಸ್ನೇಹಿತ ಮಾಡಿದ್ದಾನೆ. ಆದರೂ ತನ್ನ ಪ್ರಮಾದವನ್ನು ಒಪ್ಪಿಕೊಂಡು ರಿತ್ವಿಕ್ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕ್ರಿಮಿನಲ್ ಮೊಕದ್ದಮೆಯಿಂದ ರಿತ್ವಿಕ್ ಶೈಕ್ಷಣಿಕ ಮತ್ತು ವೃತ್ತಿ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕನ್ನಡ ಸಿನಿಮಾ ರಂಗಕ್ಕೆ ಮರಾಠಿ ಸೂಪರ್ ಸ್ಟಾರ್ ಉಪೇಂದ್ರ ಲಿಮಾಯೆ ಎಂಟ್ರಿ
ರಿತ್ವಿಕ್ ದುರ್ವರ್ತನೆಗೆ ಕಟು ಶಬ್ದಗಳಿಂದ ಚಾಟಿ ಬೀಸಿದ ನ್ಯಾಯಪೀಠ ಅಂತಿಮವಾಗಿ ವಿದ್ಯಾಭ್ಯಾಸ ಮತ್ತು ಭವಿಷ್ಯದ ದೃಷ್ಟಿಯಿಂದ ಆತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
ಏನಿದು ಕೇಸ್?
ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ಬೆನ್ನಲ್ಲೇ, ನವೆಂಬರ್ 1, 2021 ರಂದು ಕಿಂಗ್‌ಫಿಷರ್ ಬಿಯರ್ ಬಾಟಲಿಯ ಫೋಟೋ ಹಾಕಿ ಅದರ ಮೇಲೆ ಅತ್ಯಂತ ಆಕ್ಷೇಪಾರ್ಹ ಸಾಲನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

