ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ (South Kolkata) ತಾರತಲಾದಲ್ಲಿ ಗೋದಾಮು ಕುಸಿದು ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಘಟನೆ ನಡೆದ ಸ್ಥಳದಲ್ಲೇ 10 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಚಿಕಿತ್ಸೆಯ ಸಮಯದಲ್ಲಿ ಮತ್ತೊಬ್ಬ ಗಾಯಾಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 11ಕ್ಕೆ ತಲುಪಿದೆ.
ಘಟನೆಯ ನಂತರ ಸೇನೆಯ ಸುಧಾರಿತ ರಾಡಾರ್ (ಜಿಪಿಆರ್) ವ್ಯವಸ್ಥೆಯ ಸಹಾಯದಿಂದ ರಕ್ಷಣಾ ತಂಡಗಳು ಅವಶೇಷಗಳ ಅಡಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಸುತ್ತಿದೆ. ಬೆಳಿಗ್ಗೆ ಅವಶೇಷಗಳಿಂದ ಐದು ಜನರನ್ನು ರಕ್ಷಿಸಲಾಗಿದೆ. ಇಲ್ಲಿಯವರೆಗೆ ಅವಶೇಷಗಳ ಅಡಿಯಿಂದ ಒಟ್ಟು 30 ಗಾಯಾಳುಗಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋದಾಮಿನ ಮೇಲ್ಛಾವಣಿ ಕುಸಿತ; 5 ಮಂದಿ ಸಾವು, 23 ಕಾರ್ಮಿಕರು ಸಿಲುಕಿರುವ ಶಂಕೆ
ಈ ದುರಂತದಲ್ಲಿ ಸಾವನ್ನಪ್ಪಿದವರು: ಉತ್ತರ 24 ಪರಗಣ ಪ್ರದೇಶದ ಕೃಷ್ಣ ಚೌಧರಿ (30), ನಾಡಿಯಾದ ರೋಹಿತ್ ಚೌಧರಿ (40), ಪುರ್ಬಾ ಬರ್ಧಮಾನ್‌ನ ರಾಹುಲ್ ಚೌಧರಿ (17), ಕೃಷ್ಣನಗರದ ಚಂದ್ರಮಾ ಚೌಧರಿ (60), ಶ್ಯಾಮ್‌ನಗರದ ಪಪ್ಪು ರಜಕ್ (40), ಕೋಲ್ಕತ್ತಾದ ಖಿದಿರ್‌ಪುರದ ಅಜ್ಗರ್ ಹುಸೈನ್ (55), ಬಸಂತಿಯ ಸಾಹಿಲ್ ಸರ್ದಾರ್ (17), ಬಿಹಾರದ ಮುಂಗೇರ್‌ನ ಘಿ ಕುಮಾರ್ (17), ಮೆಟಿಯಾಬ್ರೂಜ್‌ನ ಹಸನ್ ಇಮಾಮ್ (44), ಅಸನ್ಸೋಲ್‌ನ ನಬಿನ್ ಸಿಂಗ್ ಮತ್ತು ಗಣೇಶ್ ಕಾಳಿಂದಿ (45) ಸಾವನ್ನಪ್ಪಿದವರು. ಗಣೇಶ್ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ.
ಭಾರೀ ಮಳೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಆದರೂ ಪೊಲೀಸರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಮತ್ತು ಸೇನೆಯ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದರು. ಬಳಿಕ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ. ಅವಶೇಷಗಳ ಅಡಿ ಸಿಲುಕಿರುವವರ ಪತ್ತೆಗೆ ಸಕ್ರಿಯವಾಗಿರುವ ಮೊಬೈಲ್‌ಗಳ ನೆಟ್‌ವರ್ಕ್ ಮಾಹಿತಿ ಕಲೆ ಹಾಕಲಾಗುತ್ತಿದೆ.
19 ಗಾಯಾಳುಗಳು ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿರುವ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನ ಒಡೆತನದ ನಿವೇಶನದಲ್ಲಿ ಈ ಗೋದಾಮು ನಿರ್ಮಿಸಲಾಗುತ್ತಿತ್ತು.
ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಗೋದಾಮಿನ ಮಾಲೀಕ ಶಂಭುನಾಥ್ ಬೆಹೆರಾ, ಸ್ಟ್ರಕ್ಚರಲ್ ಎಂಜಿನಿಯರ್ ಕಮಲ್ ಸಮಂತ, ಅಯಾನ್ ಟ್ರೇಡರ್ಸ್‌ನ ಮೇಲ್ವಿಚಾರಕ ಗುಲ್ಜಾರ್ ಹುಸೇನ್, ಕಾರ್ಮಿಕ ಪೂರೈಕೆದಾರ ದಿವಾಕರ್ ಭಂಡಾರಿ ಮತ್ತು ಅಬ್ದುಲ್ ಹಮೀದ್ ಸೇರಿದ್ದಾರೆ. ಕೋಲ್ಕತ್ತಾ ಪೊಲೀಸರು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ – 164 ಮಂದಿ ಸಾವು, 970 ಕ್ಕೂ ಹೆಚ್ಚು ಮಂದಿಗೆ ಗಾಯ
