-ದಲಿತರ ಮುಖಂಡನ ಕೊಲೆ ಕೇಸಲ್ಲಿ ತೀರ್ಪು
ಯಾದಗಿರಿ: ಜಿಲ್ಲೆಯಲ್ಲಿ ನಡೆದಿದ್ದ ದಲಿತ ಮುಖಂಡನ ಕೊಲೆ ಕೇಸ್ ಸಂಬಂಧ 12 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಯಾದಗಿರಿ ನ್ಯಾಯಾಲಯ (Yadagiri Court) ಮಹತ್ವ ಹಾಗೂ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಕೊಲೆ ಆರೋಪ ಸಾಬೀತಾದ ಹಿನ್ನೆಲೆ ಬರೋಬ್ಬರಿ 17 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ. 2014ರ ಜನವರಿಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ (Shahapura) ತಾಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಬ್ಯಾನರ್ ಹರಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಾತಿ ಸಂಘರ್ಷ ಶುರುವಾಗಿ ಗ್ರಾಮದ ದಲಿತ ಮುಖಂಡ ದೇವೇಂದ್ರಪ್ಪ ಭೀಮಪ್ಪ ದಳಪತಿ ಕೊಲೆಯಾಗಿತ್ತು. ಕೊಡಲಿ, ಬಡಿಗೆ ಹಾಗೂ ಕಲ್ಲುಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಕೇಂದ್ರ ಸಚಿವ ರವನೀತ್ ಸಿಂಗ್ ರಾಜೀನಾಮೆ
ಈ ಕುರಿತು ಶಹಾಪುರ ಪೊಲೀಸರು ಒಟ್ಟು 32 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಒಟ್ಟು 17 ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮತ್ತಿಬ್ಬರು ಅಪರಾಧಿಗೆ ತಲಾ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ದಂಡದ ಮೊತ್ತ 4.25 ಲಕ್ಷ ರೂ.ಯನ್ನು ಮೃತ ದೇವೇಂದ್ರಪ್ಪ ದಳಪತಿ ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ಸೂಚಿಸಿದೆ.
